ಮೂಡಬಿದಿರೆ: ಪದವಿ ಪಡೆಯುವಲ್ಲಿಗೆ ಶಿಕ್ಷಣ ಮುಗಿಯದು. ನಿಜವಾದ ಮಾನವರಾಗಿ, ರಾಷ್ಟ್ರಕಾಳಜಿಯ ನಾಗರಿಕರಾಗಿ ಬದಲಾಗುತ್ತಿರುವ ಕಾಲ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸುವ ಛಾತಿಯಿಂದ ಮುನ್ನಡೆಯಲು ನೂತನ ಪದವೀಧರರು ಪಣ ತೊಡಬೇಕಾಗಿದೆ ಎಂದು ಮಂಗಳೂರಿನ ತೇಜಸ್ವಿನಿ ಹಾಸ್ಪಿಟಲ್ ಮತ್ತು ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಪ್ರೊ| ಡಾ| ಎಂ. ಶಾಂತಾರಾಮ ಶೆಟ್ಟಿ ಹೇಳಿದರು.
ಕೆ.ವಿ. ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಘಟಿಕೋತ್ಸವದಲ್ಲಿ ಮಂಗಳೂರು ವಿ.ವಿ., ರಾಜೀವ್ ಗಾಂಧಿ ಆರೋಗ್ಯ ವಿ.ವಿ., ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಗಳಿಗೆ ಸಂಯೋಜಿತವಾಗಿರುವ ಆಳ್ವಾಸ್‌ನ ವಿವಿಧ ಕಾಲೇಜುಗಳ 2,011 ಮಂದಿ ನೂತನ ಪದವೀಧರರಿಗೆ ಪದವಿ ಪ್ರದಾನಗೈದು ಅವರು ಮಾತನಾಡಿದರು.
ಆಳ್ವಾಸ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. “ಮಂಗಳೂರು ವಿ.ವಿ., ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಈ ಮೂರೂ ವಿ.ವಿ.ಗಳಲ್ಲಿ ಕಲಿಕೆ, ಕ್ರೀಡೆ, ಸಾಂಸ್ಕೃತಿಕ ರಂಗಗಳಲ್ಲಿ ಆಳ್ವಾಸ್ ಸಂಸ್ಥೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ’ ಎಂದು ಅವರು ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ 630 (ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ 630), ಮಂಗಳೂರು ವಿ.ವಿ.ಯ 1096 (ಪದವಿ ಕಾಲೇಜು- 710, ಸ್ನಾತಕೋತ್ತರ-292, ಬಿಪಿಎಡ್-34, ಬಿಎಡ್-60), ರಾ.ಗಾ. ಆ.ವಿ.ವಿ.ಯ 285 (ಆಯುರ್ವೇದ -125, ಫಿಸಿಯೋಥೆರಪಿ-22, ನರ್ಸಿಂಗ್-40, ಬಿಎನ್‌ವೈಎಸ್-11, ಹೋಮಿಯೋಪತಿ- 47, ಎಂಎಲ್‌ಟಿ- 28, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್-12) ಹೀಗೆ 2011 ಮಂದಿ ಪದವಿ ಪತ್ರ ಸ್ವೀಕರಿಸಿದರು.
ಟ್ರಸ್ಟಿಗಳಾದ ಎಂ. ವಿವೇಕ ಆಳ್ವ, ಜಯಶ್ರೀ, ಅಮರನಾಥ ಶೆಟ್ಟಿ, ವಿವಿಧ ಕಾಲೇಜುಗಳ ಪ್ರಾಚಾರ್ಯರು ಉಪ
ಸ್ಥಿತರಿದ್ದರು. ಮನಃಶಾಸ್ತ್ರ ವಿಭಾಗ ಮುಖ್ಯಸ್ಥೆ ದೀಪಾ ರತ್ನಾಕರ್ ನಿರೂಪಿಸಿದರು.