Advertisement

ಭೂಮಿಯ ಆರೋಗ್ಯ ಕಾಪಾಡಲು ಮುಂದಾಗಿ

06:12 AM Jan 14, 2019 | |

ದಾವಣಗೆರೆ: ದೇಶದ ನಿಜವಾದ ಉತ್ಪಾದಕ ರೈತ ವಿನಃ ಟಾಟಾ, ಬಿರ್ಲಾ ಅಲ್ಲ ಎಂದು ಧಾರವಾಡದ ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ನಿಸರ್ಗ ಚಿಕಿತ್ಸೆ ತಜ್ಞ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು.

Advertisement

ಪಿ.ಬಿ. ರಸ್ತೆಯ ರೇಣುಕಾ ಮಂದಿರದಲ್ಲಿ ಭಾನುವಾರ ಕೃಷಿ ಇಲಾಖೆ ಹಮ್ಮಿಕೊಂಡಿರುವ 2 ದಿನಗಳ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಾಟಾ, ಬಿರ್ಲಾ ಮುಂತಾದವರು ಈ ಭೂಮಿಯನ್ನು ಬರಡಾಗಿಸಿದ್ದಾರೆ. ಅವರು ಅನುತ್ಪಾದಕರು. ಆದರೆ, ದೇಶದ ನಿಜವಾದ ಉತ್ಪಾದಕ ರೈತ ಮಾತ್ರ. ಈ ಹಿನ್ನೆಲೆಯಲ್ಲಿ ರೈತ ಬೆಳೆದ ಬೆಳೆ ನೇರವಾಗಿ ಗ್ರಾಹಕರಿಗೆ ದೊರಕುವಂತಾಗಬೇಕು. ರೈತರು ಅಭಿವೃದ್ಧಿ ಹೊಂದಬೇಕು ಎಂದರು.

ರೈತರು ಇಂದು ಹಣ ಗಳಿಸುವ ಭರದಲ್ಲಿ ಕೃಷಿ ಪದ್ಧತಿಯನ್ನು ಬದಲಾಯಿಸಿಕೊಂಡಿದ್ದಾರೆ. ಒಂದೇ ಬೆಳೆ ಬೆಳೆಯಲು ಸೀಮಿತವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಮತ್ತೂಂದೆಡೆ ಲಾಭದ ನಿರೀಕ್ಷೆಯಿಂದ ವ್ಯಾಪಕವಾಗಿ ರಾಸಾಯನಿಕ ಬಳಸುತ್ತಿದ್ದಾರೆ. ಇದರಿಂದ ಭೂಮಿಯ ಜೀವಸತ್ವ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರು ವರ್ಷದ 365 ದಿನವೂ ಕೂಡ ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಆದರೆ, ಶೇ.70 ರಿಂದ 80ರಷ್ಟು ಜನರು ಆ ಕೆಲಸ ಮಾಡುತ್ತಿಲ್ಲ. ಈ ಧೋರಣೆ ಬದಲಾಗಬೇಕು. ನಮ್ಮ ಸಮೃದ್ಧ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಒಂದೇ ಕಡೆ ಬೆಳೆದು ನೆಮ್ಮದಿಯ ಜೀವನ ಕಂಡುಕೊಳ್ಳಬೇಕು ಎಂದರು.

Advertisement

ನೇಗಿಲ ಮೇಲೆಯೇ ನಿಂತಿದೆ ಧರ್ಮ. ಇದನ್ನ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ರೈತರು ಕೃಷಿ ವಿಜ್ಞಾನಿ ಸುಭಾಷ್‌ ಪಾಳೇಗಾರ್‌ ಅವರು ತಿಳಿಸಿದ ಕೃಷಿ ರಥದ ಚಕ್ರಗಳಾದ ಬೀಜಾಮೃತ, ಜೀವಾಮೃತ, ಮುಚ್ಚಿಗೆ, ತೇವಾಂಶ ಈ ನಾಲ್ಕು ಅಂಶಗಳನ್ನು ಅಳವಡಿಸಿಕೊಂಡು ಜೈವಿಕ ಕೃಷಿ ಪದ್ಧತಿ ಹಾಗೂ ನೈಸರ್ಗಿಕ ಕೃಷಿ ಪದ್ಧತಿ ಮಾಡಲು ಮುಂದಾಗಬೇಕು. ಆ ಮೂಲಕ ಭೂಮಿಯ ಆರೋಗ್ಯ ಕಾಪಾಡುವ ಜೊತೆಗೆ ತಮ್ಮ ಆರೋಗ್ಯವನ್ನು ಸಮೃದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರಿಗೆ ಇಂದು ದುಃಖ, ಸಾಲ, ಅಪಮಾನ ಎಲ್ಲವೂ ಇದೆ. ಆದರೆ ಅದಕ್ಕೆ ಧೃತಿಗೆಡಬಾರದು. ದೇಶದ ಚಕ್ರ ತಿರುಗಬೇಕಾದರೆ ಕೃಷಿ ಅತ್ಯಗತ್ಯ. ಆದ್ದರಿಂದ ಕೃಷಿಕರಾಗಿರುವುದಕ್ಕೆ ಹೆಮ್ಮೆಪಡಿ, ಕೀಳರಿಮೆ ಬೇಡ. ಆರೋಗ್ಯಪೂರ್ಣ ಕೃಷಿ ಮಾಡಿ ಎಂದು ಹೇಳಿದರು.

ರಾಜ್ಯದಲ್ಲಿ ಕಿರಿಧಾನ್ಯ, ತೃಣ ಧಾನ್ಯ ಎಂದು ಕರೆಯಲಾಗುತ್ತಿದ್ದ ಸತ್ವಯುತ ಧಾನ್ಯಗಳನ್ನು ಸಿರಿಧಾನ್ಯ ಎಂದು ಪ್ರಥಮ ಬಾರಿಗೆ ಕರೆ ಕೀರ್ತಿ ಮೈಸೂರಿನ ಆಹಾರ ತಜ್ಞ ಡಾ| ಖಾದರ್‌ ಅವರಿಗೆ ಸಲ್ಲುತ್ತದೆ. ಅದೇ ರೀತಿ ಜೈವಿಕ ಕೃಷಿ ಪದ್ಧತಿಯನ್ನು ಪರಿಚಯಿಸಿದ ಶ್ರೇಯಸ್ಸು ಕೃಷಿ ತಜ್ಞ ಸುಭಾಷ್‌ ಪಾಳೇಗಾರ್‌ ಅವರಿಗೆ ಸಲ್ಲುತ್ತದೆ ಎಂದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕುಂದೂರು ಹನುಮಂತಪ್ಪ, ಡಾ| ಪ್ರಕಾಶ್‌ ಭಟ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next