ಧಾರವಾಡ: ಹೊಲ್ತಿಕೋಟಿ ಗ್ರಾಮದ ಕೆರೆ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಪರಿಣಾಮವಾಗಿ ರೈತರ ಬೆಳೆಗಳು, ಪ್ರಾಣಿ, ಪಕ್ಷಿಗಳಿಗೆ ಅಪಾರ ಹಾನಿಯಾಗಿದೆ. ಕೆರೆಯ ಶಾಶ್ವತ ದುರಸ್ತಿಗೆ ಆದ್ಯತೆಯಡಿ ಕ್ರಮ ವಹಿಸಲಾಗುವುದು ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಹೊಲ್ತಿಕೋಟಿಯ ಕೆರೆ ಒಡೆದ ಸ್ಥಳಕ್ಕೆ ಭೇಟಿ ನೀಡಿ ಹಾನಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 110 ಮಿಲಿ ಮೀಟರ್ ಪ್ರಮಾಣದ ಮಳೆಯಾದ ಪರಿಣಾಮ ಹೊಲ್ತಿಕೋಟಿ ಕೆರೆಗೆ ಒಳಹರಿವು ಹೆಚ್ಚಾಗಿ ತಡೆಗೋಡೆ ಒಡೆದು ಸುಮಾರು 27 ಎಕರೆ ವಿಸ್ತಾರದ ಕೆರೆಯಲ್ಲಿ ಸಂಗ್ರಹವಾಗಿದ್ದ ನೀರು ಪೋಲಾಗಿದೆ. ಸದ್ಯ ಸೂಕ್ತ ತಾಂತ್ರಿಕತೆಯೊಂದಿಗೆ ಪೋಲಾಗುತ್ತಿರುವ ನೀರನ್ನು ತಡೆಯಲು ಪ್ರಯತ್ನಿಸಲಾಗುವುದು. ಸುಮಾರು 300 ಎಕರೆಗೂ ಅಧಿ ಕ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, ಭತ್ತ ಹಾನಿಯಾಗಿದೆ ಎಂದರು.
ಕುಂದಗೋಳ, ನವಲಗುಂದ, ಹುಬ್ಬಳ್ಳಿ, ಕಲಘಟಗಿ ತಾಲೂಕುಗಳಲ್ಲಿಯೂ ಮಳೆಯಿಂದ ಹತ್ತಿ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಬೆಳೆ ಹಾಗೂ ಮನೆ ಹಾನಿಗೊಳಗಾದವರಿಗೆ ಸಮೀಕ್ಷೆ ವರದಿ ಆಧರಿಸಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.
ಹೊಲ್ತಿಕೋಟಿ ಕೆರೆಯು 30 ವರ್ಷಗಳ ಹಿಂದೆ ಒಮ್ಮೆ ಒಡೆದಿತ್ತು ಎಂಬುದನ್ನು ಸ್ಥಳೀಯ ರೈತರು ಹೇಳಿದ್ದಾರೆ. ಕೆರೆಯ ಶಾಶ್ವತ ದುರಸ್ತಿಗೆ ಕ್ರಮ ವಹಿಸಲಾಗುವುದು. ಹೊಲ್ತಿಕೋಟಿ ಟೆನೆಂಟ್ ಫಾರ್ಮಿಂಗ್ ಸೊಸೈಟಿಯ ಹೆಸರಿನ ಮಾಲೀಕತ್ವದಲ್ಲಿರುವ ಸುಮಾರು 220 ಎಕರೆ ಭೂಮಿಯನ್ನು ರೈತರ ಹೆಸರಿಗೆ ವರ್ಗಾಯಿಸಲು ಸ್ಥಳೀಯರ ಬೇಡಿಕೆ ಇದೆ. ಅಗತ್ಯ ದಾಖಲೆಗಳನ್ನು ಪಡೆದು ವರ್ಗಾಯಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಸರ್ಕಾರದ ಮಟ್ಟದಲ್ಲಿಯೂ ನೆರವು ನೀಡಲಾಗುವುದು ಎಂದರು. ಹಳ್ಳಿಗೇರಿ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಅರಳಿಕಟ್ಟಿ, ಜಿಪಂ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ, ತಹಶೀಲ್ದಾರ್ ಡಾ| ಸಂತೋಷ ಕುಮಾರ ಬಿರಾದಾರ, ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಂ. ಗೌಡರ್ ಇನ್ನಿತರರಿದ್ದರು.
ಮುಂದಿನ ಎರಡ್ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರು ಜೀವ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು. ಹೊಲ-ಗದ್ದೆಗಳಿಗೆ ತೆರಳುವಾಗ, ಹಳ್ಳ-ಕೊಳ್ಳಗಳನ್ನು ದಾಟುವ ಮುನ್ನ ತೀವ್ರ ಎಚ್ಚರಿಕೆ ವಹಿಸಬೇಕು. ಮಳೆ ಬೀಳುವಾಗ ಸುರಕ್ಷಿತ ಸ್ಥಳಗಳಲ್ಲಿ ಇರಬೇಕು.
ಶಂಕರಪಾಟೀಲ ಮುನೇನಕೊಪ್ಪ, ಸಚಿವ