ಬೆಳಗಾವಿ: ರಾಜ್ಯದಲ್ಲಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2016ರಿಂದ 2020ರ ವರೆಗೆ ನಿವೃತ್ತಿ, ರಾಜೀನಾಮೆ ಮೊದಲಾದ ಕಾರಣಗಳಿಂದ ಖಾಲಿಯಾಗಿರುವ 4,521 ಬೋಧಕ ಹುದ್ದೆಗಳನ್ನು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 267 ಬೋಧಕ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪರಿಷತ್‌ನಲ್ಲಿ ಶಶಿಲ್ ನಮೋಶಿ, ಮಧು ಮಾದೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ ಅವರು ಮಂಡಿಸಿದ್ದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ಶಿಕ್ಷಕರ ಕೊರತೆ ವಿಷಯವನ್ನು ಗಂಭೀರವಾಗಿ ತೆಗೆದು
ಕೊಂಡಿದ್ದೇವೆ. ಈ ಅಧಿವೇಶನದ ಸಮಯದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವದಾಗಿ ಭರವಸೆ ನೀಡಿದರು.
ಖಾಸಗಿ ಅನುದಾನಿತ ಪ.ಪೂ. ಕಾಲೇಜುಗಳಲ್ಲಿ 2016ರಿಂದ ಖಾಲಿ ಇರುವ ಬೋಧಕ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಭಾರ ಕೊರತೆ ಇರುವ ಉಪನ್ಯಾಸಕರನ್ನು ಹತ್ತಿರದ ಅಗತ್ಯವಿರುವ ಅ. ಪ. ಪೂ. ಕಾಲೇಜುಗಳಿಗೆ ನಿಯೋಜಿಸಲಾಗುವುದು ಎಂದರು.