Advertisement

ಧರೆಗುರುಳಿದ ಮರಗಳು ತೆರವಾಗದೆ ತೊಂದರೆ

12:35 PM Apr 27, 2018 | Team Udayavani |

ಬೆಂಗಳೂರು: ನಗರದಲ್ಲಿ ಮಂಗಳವಾರ, ಬುಧವಾರ ಸುರಿದ ಮಳೆಯಿಂದಾಗಿ 150ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ್ದು, ಬಿಬಿಎಂಪಿ ಸಿಬ್ಬಂದಿ ಶೀಘ್ರ ಮರಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಗುರುವಾರ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

Advertisement

ನಗರದಲ್ಲಿ ಬಿರುಗಾಳಿ ಸಹಿತ ಎರಡು ದಿನ ಸುರಿದ ಮಳೆಯಿಂದಾಗಿ ನಗರದ ಕೇಂದ್ರ ಭಾಗ ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಮರಗಳು ಧರೆಗುರುಳಿವೆ. ಆದರೆ, ಪಾಲಿಕೆಯ ಸಿಬ್ಬಂದಿ ಶೀಘ್ರ ಮರಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಕೆಲವು ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೆ, ಕತ್ತರಿಸಿದ ಮರಗಳನ್ನು ಪಾದಚಾರಿ ಮಾರ್ಗದ ಮೇಲೆ ಹಾಕಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. 

ಮಲ್ಲೇಶ್ವರದ 7ನೇ ಅಡ್ಡರಸ್ತೆಯಲ್ಲಿ ಉರುಳಿದ ಬೃಹತ್‌ ಮರವನ್ನು ಪಾಲಿಕೆ ಸಿಬ್ಬಂದಿ ಗುರುವಾರ ಸಂಜೆ ತೆರವುಗೊಳಿಸಿದ್ದಾರೆ. ಆದರೆ, ಮಂಗಳವಾರ ಹಾಗೂ ಬುಧವಾರ ನಗರದ ಕೋರಮಂಗಲ, ಸ್ಯಾಂಕಿ ಕೆರೆ, ಎಚ್‌ಆರ್‌ಬಿಆರ್‌ ಬಡಾವಣೆ, ವೆಸ್ಟ್‌ ಆಫ್ ಕಾರ್ಡ್‌ ರಸ್ತೆ, ಬಸವೇಶ್ವರ ನಗರ, ಸರ್ಕಲ್‌ ಮಾರಮ್ಮ ವೃತ್ತ, ಯಶವಂತಪುರ, ಶ್ರೀನಗರ, ಸದಾಶಿವನಗರ, ಡಾಲರ್ ಕಾಲೋನಿ, ಗಿರಿನಗರ, ಜಯನಗರ, ಕತ್ತರಿಗುಪ್ಪೆ, ವಿಜಯನಗರ, ನವರಂಗ್‌, ಶ್ರೀಗಂಧ ಕಾವಲ್‌, ನಾಗರಬಾವಿ, ರಾಜಾಜಿನಗರ ಸೇರಿದಂತೆ ನಗರದ ಹತ್ತಾರು ಭಾಗಗಳಲ್ಲಿ ಉರುಳಿರುವ ಮರಗಳ ಕೊಂಬೆಗಳು, ತುಂಡುಗಳನ್ನು ಇನ್ನೂ ವಿಲೇವಾರಿ ಮಾಡಿಲ್ಲ.

ಸಿಬ್ಬಂದಿ ಹೈರಾಣ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಮರಗಳು ಉರುಳಿದ ದೂರುಗಳು ಬರುತ್ತಿರುವುದರಿಂದ ಪಾಲಿಕೆಯ ಅರಣ್ಯ ಘಟಕ ತಂಡಗಳ ಸದಸ್ಯರು ಅವುಗಳನ್ನು ತೆರವುಗೊಳಿಸುವಲ್ಲಿ ಹೈರಾಣಾಗಿದ್ದಾರೆ. ಈ ಅವಧಿಯಲ್ಲಿ 40ಕ್ಕೂ ಹೆಚ್ಚು ಬೃಹದಾಕಾರದ ಮರಗಳು ಉರುಳಿ 15 ವಾಹನಗಳು ಜಖಂಗೊಂಡಿವೆ. ಜತೆಗೆ 110ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಉರುಳಿದ್ದು, ಅವುಗಳನ್ನು ತೆರವುಗೊಳಿಸಲು ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. 

ಇದರ ಮಧ್ಯೆಯೂ ದೂರುಗಳಿಗೆ ಸ್ಪಂದಿಸುತ್ತಿರುವ ಅರಣ್ಯ ಘಟಕದ ಸಿಬ್ಬಂದಿಯು ರಸ್ತೆಯಲ್ಲಿರುವ ಮರಗಳನ್ನು ಕೂಡಲೇ ವಾಹನ ಸಂಚಾರಕ್ಕೆ ಅನುಕೂಲ ಮಾಡುತ್ತಿದ್ದು,  ತುಂಡರಿಸಿ ಪಾದಚಾರಿ ಮಾರ್ಗಗಳಲ್ಲಿ ಇರಿಸಿ ಬೇರೆ ದೂರುಗಳಿಗೆ ಸ್ಪಂದಿಸಲು ತೆರಳುತ್ತಿದ್ದಾರೆ. ಇದರಿಂದಾಗಿ ಬಹುತೇಕ ಕಡೆಗಳಲ್ಲಿ ಮರದ ಕೊಂಬೆಗಳು ಹಾಗೂ ತುಂಡುಗಳು ಪಾದಚಾರಿ ಮಾರ್ಗಗಳನ್ನು ಆವರಿಸಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next