Advertisement

ಸಮಸ್ಯೆಗಳ ಆಗರ ದೇವದುರ್ಗ ಆಸ್ಪತ್ರೆ

02:53 PM Aug 04, 2020 | Suhan S |

ದೇವದುರ್ಗ: ಸ್ಥಳೀಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರಿವೆ.

Advertisement

ಒಂದೇ ಆಂಬ್ಯುಲೆನ್ಸ್‌: ಇಲ್ಲಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಸುತ್ತಲೂ 40ಕ್ಕೂ ಹೆಚ್ಚು ಹಳ್ಳಿಗಳ ಜನರು ಚಿಕಿತ್ಸೆಗೆ ಬರುತ್ತಾರೆ. ಎಲ್ಲರಿಗೂ ನೂರು ಹಾಸಿಗೆ ಆಸ್ಪತ್ರೆಯೇ ಆಸರೆಯಾಗಿದೆ. ತುರ್ತು ಪರಿಸ್ಥಿತಿ ಸಂದರ್ಭ ಒಂದೇ ಅಂಬ್ಯುಲೆನ್ಸ್‌ ಇರುವುದರಿಂದ ಆಗಾಗ ಸಮಸ್ಯೆ ಕಂಡು ಬರುತ್ತದೆ. ಮೂರು ಅಂಬ್ಯುಲೆನ್ಸ್‌ ಸೌಲಭ್ಯ ಹೊಂದಿದೆ. ಆದರೆ ಒಂದೇ ಇರುವ ಕಾರಣಕ್ಕೆ ರೋಗಿಗಳನ್ನು ಕೆರೆದ್ಯೊಯಲು ನಗು ಮಗು ಅಂಬ್ಯುಲೆನ್ಸ್‌ ಅನಿವಾರ್ಯವಾಗಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷವಾಗಿದ್ದ, ಅಂಬ್ಯುಲೆನ್ಸ್‌ ಇದೀಗ ಎಲ್ಲದಕ್ಕೂ ಬಳಕೆ ಆಗುತ್ತಿದೆ.

ಮೂಲೆಗೆ ಸೇರಿದ ವಾಹನ: ತಾಲೂಕು ಆರೋಗ್ಯ ವೈದ್ಯಾಧಿಕಾರಿ ಬಳಸುತ್ತಿರುವ ಸರಕಾರಿ ವಾಹನ ಕಳೆದ ಆರೇಳು ತಿಂಗಳಿಂದ ದುರಸ್ತಿಯಲ್ಲಿರುವ ಕಾರಣ ಮೂಲೆಗೆ ಸೇರಿದೆ. ವೈದ್ಯರು ಸ್ವಂತ ವಾಹನದಲ್ಲೇ ಹಳ್ಳಿಗಳಿಗೆ, ಕೋವಿಡ್ ಚಿಕಿತ್ಸೆ ಕೇಂದ್ರಗಳಿಗೆ ತೆರಳುತ್ತಿದ್ದಾರೆ.

ವೈದ್ಯರ ಕೊರತೆ: ಸ್ಥಳೀಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಕೆಲ ತಜ್ಞ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಬಡರೋಗಿಗಳು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ನರರೋಗ, ಕಿವಿ, ಮೂಗು ಗಂಟಲು, ಚರ್ಮ ರೋಗ, ನೇತ್ರ ತಜ್ಞ ಸೇರಿ ವೈದ್ಯರ ಸಮಸ್ಯೆ ಬಡ ರೋಗಿಗಳಿಗೆ ಕಾಡುತ್ತಿದೆ. ನಮ್ಮನಾಳುವ ಜನಪ್ರತಿನಿಧಿಗಳು ವೈದ್ಯರ ಕೊರತೆ ಹುದ್ದೆ ಭರ್ತಿ ಮಾಡುವಲ್ಲಿ ವಿಫರಾಗಿದ್ದಾರೆ. ತಾಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಕೆಲ ವೈದ್ಯರ ಸಮಸ್ಯೆ ಬಿಗಡಾಯಿಸಿದೆ. ಜಾಲಹಳ್ಳಿ ಮೂರು ಹುದ್ದೆಯಲ್ಲಿ ಒಬ್ಬರೇ ವೈದ್ಯರು. ರಾಮದುರ್ಗ, ಗಲಗ, ಮಸರಕಲ್‌, ಚಿಚೋಂಡಿ ಸೇರಿ ಇತರೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆಗಳು ಖಾಲಿ ಇವೆ. ಎಬಿಬಿಎಸ್‌ ವೈದ್ಯರು ಇದ್ದು, ಸ್ಥಳೀಯ ಆಸ್ಪತ್ರೆಗೆ ಎರವಲ್‌ ಸೇವೆಯಲ್ಲಿ ತೊಡಗಿದ್ದಾರೆ. ಆಯುಷ್‌ ವೈದ್ಯರಿಂದ ಬಡರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ಟಾಫ್‌ನರ್ಸ್‌ಗಳೇ ವೈದ್ಯರಾಗಿದ್ದಾರೆ. ರಾತ್ರಿ ಪಾಳೆಯದಲ್ಲಿ ನರ್ಸ್‌ಗಳು ಬಡರೋಗಿಗಳಿಗೆ ಸೇವೆಗೆ ಸಿಗುತ್ತಿಲ್ಲ ಎಂಬ ಆರೋಪದ ಕೂಗು ಕೇಳಿಬರುತ್ತಿದೆ.

ತಜ್ಞ ವೈದ್ಯರ ಕೊರತೆ ಆಂಬ್ಯುಲೆನ್ಸ್‌ ಸಮಸ್ಯೆ ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮೀಣ ಭಾಗದಲ್ಲಿ ಸಮಸ್ಯೆ ಇದ್ದು, ಇರುವ ವೈದ್ಯರಿಂದ ಬಡರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. –ಡಾ.ಬನದೇಶ್ವರ, ತಾಲೂಕು ಆರೋಗ್ಯಾಧಿಕಾರಿ.

Advertisement

ಗ್ರಾಮೀಣ ಭಾಗದಲ್ಲಿ ವೈದ್ಯರ ಸಮಸ್ಯೆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಅತಿಯಾಗಿದೆ. ನಕಲಿ ವೈದ್ಯರ ಹಾವಳಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು. –ಅಮರಪ್ಪ, ನಿವೃತ್ತ ಶಿಕ್ಷಕರು.

 

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next