Advertisement

ದಿನಕ್ಕೆ 16 ರೂ. ಸಂಭಾವನೆ; ಬಿಎಲ್‌ಒಗಳ ಗೋಳು ಕೇಳುವವರ್ಯಾರು?

11:39 AM Dec 10, 2022 | Team Udayavani |

ಶಿರ್ವ: ಗ್ರಾಮ ಮಟ್ಟದ ಮತಗಟ್ಟೆ ಅಧಿಕಾರಿ (ಬೂತ್‌ ಲೆವೆಲ್‌ ಆಫೀಸರ್‌)ಗಳಾಗಿ ಸುಮಾರು 20 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಗ್ರಂಥಪಾಲಕರ ಗೋಳು ಕೇಳುವವರಿಲ್ಲದಂತಾಗಿದೆ.

Advertisement

ಚುನಾವಣೆ ಸಂದರ್ಭಗಳಲ್ಲಿ ಮತದಾರರ ಗುರುತು ಚೀಟಿ ಪಡೆಯಲು ಅರ್ಜಿ ತುಂಬಿಸುವ ಮೂಲಕ ಬಿಎಲ್‌ಒಗಳ ಕೆಲಸ ಪ್ರಾರಂಭಗೊಳ್ಳುತ್ತ ದೆ. ಪ್ರಸ್ತುತ ವರ್ಷಪೂರ್ತಿ ಎಂಬಂತೆ ಅವರದೇ ಮೊಬೈಲ್‌ ಮೂಲಕ ಮತದಾರರ ಹೆಸರು ಸೇರ್ಪಡೆ, ಮರಣ ಹೊಂದಿದ ಮತದಾರರ ಹೆಸರು ರದ್ದತಿ, ವಲಸೆ ಹೋದವರ ಹೆಸರು ರದ್ದತಿ ಅಲ್ಲದೆ ಮನೆಮನೆಗೆ ಭೇಟಿ ನೀಡಿ ಮತದಾರರ ಗುರುತು ಚೀಟಿಯ ಬಗ್ಗೆ ಆಧಾರ್‌ ಜೋಡಣೆ, ಮೊಬೈಲ್‌ ನಂಬರನ್ನು ಮೊಬೈಲ್‌ ಆ್ಯಪ್‌ನಲ್ಲಿ ಜೋಡಣೆ ಮಾಡುವ ಕೆಲಸ ನಡೆಯುತ್ತಿದೆ.

ಕಳೆದ 3 ವರ್ಷಗಳಿಂದ ಬಿಎಲ್‌ಒಗಳಿಗೆ ವಾರ್ಷಿಕ ಗೌರವಧನ ಕೇವಲ 7,000 ರೂ. ಮಾತ್ರ. ಅದರಲ್ಲೂ ಪ್ರಸ್ತುತ ವರ್ಷದಿಂದ 1,000 ರೂ. ಕಡಿತಗೊಳಿಸಿ 6,000 ರೂ.ವನ್ನು ಜಮಾ ಮಾಡಲಾಗಿದೆ.

ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭಗಳಲ್ಲಿ ರವಿವಾರ ಸೇರಿದಂತೆ ದಿನವಿಡೀ ಕೆಲಸ ನಿರ್ವಹಿಸಲು ಮತ್ತು ಬಿಎಲ್‌ಒ ಸಭೆಯ ಬಗ್ಗೆ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಬರಲು ಅಧಿಕಾರಿಗಳಿಂದ ಆದೇಶ ಬರುತ್ತದೆ. ಮೊಬೈಲ್‌ ರೀಚಾರ್ಜ್‌, ಹೋಗಿ ಬರುವ ಖರ್ಚು, ಊಟದ ವ್ಯವಸ್ಥೆಯ ಬಗ್ಗೆ ತಮ್ಮ ಸ್ವಂತ ಖರ್ಚಿನಿಂದಲೇ ಭರಿಸಬೇಕಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಹೆಚ್ಚಿನ ಕೆಲಸದ ಹೊರೆ ನೀಡುತ್ತಾರೆಯೇ ಹೊರತು ಸಂಭಾವನೆ ಹೆಚ್ಚಿಸುವ ಬಗ್ಗೆ ಯಾವುದೇ ಸ್ಪಂದನೆ ನೀಡುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬಿಎಲ್‌ಒ ಅಳಲು ತೋಡಿಕೊಂಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಹೆಸರು ಸೇರ್ಪಡೆ, ರದ್ದತಿ ಬಗ್ಗೆ ಮತದಾರರಿಂದ ಆಧಾರ್‌ ಸೇರಿದಂತೆ ಇತರೆ ದಾಖಲೆಗಳನ್ನು ಸಂಗ್ರಹಿಸುವುದೇ ತ್ರಾಸದಾಯಕವಾಗಿದೆ. ಆದರೂ ಮತದಾರರ ಮನವೊಲಿಸಿ ದಾಖಲೆ ಸಂಗ್ರಹಿಸಿ ವರದಿ ಸಲ್ಲಿಸಿದರೂ ಕೆಲವೊಮ್ಮೆ ಅಧಿಕಾರಿಗಳ ಲೋಪದಿಂದ ಪರಿಷ್ಕರಿಸಿದ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಬಾರದೇ ಇರುವುದು ಮತ್ತು ರದ್ದ ತಿಗೆ ನೀಡಿದ ಹೆಸರು ರದ್ದುಗೊಳ್ಳದೇ ಇರುವುದನ್ನು ಜನಪ್ರತಿನಿಧಿಗಳು ಮತ್ತು ಮತದಾರರು ಬಿಎಲ್‌ಒ ಅವರನ್ನು ಹೊಣೆಗಾರರನ್ನಾಗಿಸುತ್ತಾರೆ.

Advertisement

ಮೊಬೈಲ್‌ ಆ್ಯಪ್‌ಗೆ ಅಪ್‌ಲೋಡ್‌ ಮಾಡಲು ಸರ್ವರ್‌ ಸಮಸ್ಯೆಯಿಂದ ಮಧ್ಯರಾತ್ರಿಯವರೆಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಲ್ಲದೆ ಬೆಳಗ್ಗೆ ಯಾವುದೋ ಒಂದು ವರದಿಯನ್ನು ಕೇಳಿ ಮಧ್ಯಾಹ್ನದೊಳಗೆ ನೀಡುವಂತೆ ಮೇಲಧಿಕಾರಿಗಳಿಂದ ಆದೇಶ ಬರುತ್ತದೆ. ಈ ರೀತಿಯ ಒತ್ತಡಗಳಿಂದ ಬಿಎಲ್‌ಒಗಳಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಬೆರೆಯಲು ಕೂಡ ಸಮಯದ ಅಭಾವ ಕಾಡುತ್ತಿದೆ. ಆದರೆ ಇಷ್ಟೆಲ್ಲ ಕೆಲಸ ನಿರ್ವಹಿಸಿದರೂ ಅವರಿಗೆ ಸಿಗುವ ಪ್ರತಿಫಲ ಮಾತ್ರ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ.

ಸಾಮೂಹಿಕ ರಾಜೀನಾಮೆ

ಹಲವು ವರ್ಷಗಳಿಂದ ಕಾರ್ಯನಿರ್ವಹಿಸು ತ್ತಿರುವ ಶಿರ್ವ ಗ್ರಾ.ಪಂ. ವ್ಯಾಪ್ತಿಯ 13 ಬಿಎಲ್‌ಒಗಳು ಕಳೆದ 3 ವರ್ಷಗಳಿಂದ ಕೆಲಸವನ್ನು ನಿರ್ವಹಿಸಿದ್ದರು. ಕೋವಿಡ್‌ ಸಂದರ್ಭದ ಹೆಚ್ಚುವರಿ ಕೆಲಸಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸಂಭಾವನೆ ನೀಡಿರುವುದಿಲ್ಲ. ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಸ್ತಾವನೆ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿರುವುದಿಲ್ಲ. ಕೆಲಸದ ಒತ್ತಡಗಳಿಂದ ಮನ ನೊಂದಿರುವ ಶಿರ್ವ ಗ್ರಾ.ಪಂ. ವ್ಯಾಪ್ತಿಯ ಬಿಎಲ್‌ ಒಗಳು ತಹಶೀಲ್ದಾರ್‌ ಅವರಿಗೆ ಗುರುವಾರ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next