Advertisement
ನಗರದ ಕರ್ನಾಟಕ ವಿವಿಯ ಪತ್ರಿಕೋದ್ಯಮ ವಿಭಾಗದ ಸನಿಹದಲ್ಲಿಯೇ ವಾರ್ಡ್ ನಂ.17ರ ವ್ಯಾಪ್ತಿಯಲ್ಲಿರುವ ಪುಟ್ಟ ಶಾಂಭವಿ ನಗರದ ವ್ಯಥೆಯಿದು. ನಗರ ವ್ಯಾಪ್ತಿಯಲ್ಲಿಯೇ ಇದ್ದರೂ ಮೂಲಸೌಕರ್ಯಗಳಿಂದ ವಂಚಿತರಾಗಿ ಕುಗ್ರಾಮದಲ್ಲಿರುವಂತೆ ಭಾಸವಾಗುತ್ತಿದೆ. 40 ಕುಟುಂಬಗಳ ವ್ಯಥೆ: ಗುರುಕಲ್ ಹೌಸಿಂಗ್ ಸೊಸೈಟಿಯಡಿ ತಯಾರಿಸಿದ ಲೇಔಟ್‌ನಲ್ಲಿ 200 ಪ್ಲಾಟ್‌ಗಳಿದ್ದು, ಈ ಪೈಕಿ 40 ಪ್ಲಾಟ್ ಗಳಲ್ಲಿ ಮನೆಗಳು ನಿರ್ಮಾಣಗೊಂಡಿವೆ. ಇವುಗಳಿಗೆ ಜಲಮಂಡಳಿ ಹಾಗೂ ಹೆಸ್ಕಾಂ ಸೌಲಭ್ಯ ನೀಡಿದ್ದು ಬಿಟ್ಟರೆ ಉಳಿದ ಮೂಲಸೌಕರ್ಯಗಳೇ ಇಲ್ಲ. ಬೀದಿ ದೀಪಗಳು ಇದ್ದರೂ ರಾತ್ರಿ ಬೆಳಕು ನೀಡುವುದು ಕಡಿಮೆ. ಸುಸಜ್ಜಿತ ರಸ್ತೆಗಳಿಲ್ಲದ ಕಾರಣ ಸಾರಿಗೆ ಬಸ್‌ಗಳ ಸೇವೆ ಇಲ್ಲ. ಸುತ್ತಮುತ್ತ ಹುತ್ತಗಳು ತಲೆ ಎತ್ತಿದ್ದು, ವಿಷ ಜಂತುಗಳ ತಿರುಗಾಟ ಸಾಮಾನ್ಯ. ಇದರಿಂದ ದೇವರ ಮೇಲೆ ಭಾರ ಹಾಕಿ ಜೀವನ ಕಳೆಯುತ್ತಿದ್ದಾರೆ ಶಾಂಭವಿ ನಗರದ 40 ಕುಟುಂಬಗಳು.
Related Articles
Advertisement
ಮುಳ್ಳಾಗಿರುವ ಪಾಲಿಕೆ ಷರತ್ತು : ಪ್ಲಾಟ್‌ಗಳಲ್ಲಿ ಮನೆ ಕಟ್ಟಲು ಅನುಮತಿ ಕೇಳುವಾಗಲೇ ಶೇ.80 ಮನೆಗಳ ನಿರ್ಮಾಣ ಆಗುವವರೆಗೂ ರಸ್ತೆ ಸೇರಿದಂತೆ ಮೂಲಸೌಕರ್ಯ ನೀಡಲಾಗದು ಎಂಬ ಷರತ್ತು ವಿಧಿಸಿಯೇ ಪಾಲಿಕೆ ಅನುಮತಿ ಕೊಟ್ಟಿದೆ. ಆದರೆ ಈಗ 40 ಮನೆಗಳ ಸಂಖ್ಯೆ ದಶಕ
ಕಳೆದರೂ ಏರಿಕೆ ಆಗುತ್ತಿಲ್ಲ. ಹೀಗಾಗಿ ಶೇ.80 ಮನೆಗಳ ನಿರ್ಮಾಣ ಆಗದ ಹೊರತು ಪಾಲಿಕೆ ಸೌಲಭ್ಯ ಮರೀಚಿಕೆಯಾದಂತಾಗಿದೆ. ಗುರುಕಲ್ ಹೌಸಿಂಗ್ ಸೊಸೈಟಿ ಹಸ್ತಾಂತರ ಮಾಡಿದ ಬಳಿಕ 2001ರಲ್ಲಿಯೇ ಪಾಲಿಕೆ ವ್ಯಾಪ್ತಿಯಲ್ಲಿ ಶಾಂಭವಿ ನಗರ ಬಂದಿದೆ. ಆದರೆ ಶೇ.80 ಮನೆ ಆಗುವವರೆಗೂ ರಸ್ತೆ ಮಾಡಲ್ಲ ಎಂಬ ಷರತ್ತು ಇದೆ. ಆಗಲೇ ಆಕ್ಷೇಪ ಮಾಡಿದ್ದರೆ ಮನೆ ಕಟ್ಟಲು ಅನುಮತಿ ಸಹ ನೀಡಲ್ಲ. ಇದರಿಂದ ಹೆಸ್ಕಾಂ, ಜಲಮಂಡಳಿ ಸಹ ಸೌಲಭ್ಯ ನೀಡದು. ಹೀಗಾಗಿ ಪಾಲಿಕೆ ಹಾಕುವ ಷರತ್ತು ಒಪ್ಪಿಕೊಂಡು ಮನೆ ಕಟ್ಟಿಕೊಂಡಿರುವ ಈ 40 ಕುಟುಂಬಗಳು ಈಗ ದುಸ್ಥಿತಿ ಅನುಭವಿಸುವಂತಾಗಿದೆ.
ಸುಪರ್ದಿಗೆ ಪಡೆದುಕೊಳ್ಳಿ : ಖಾಲಿ ಬಿದ್ದಿರುವ ಪ್ಲಾಟ್‌ಗಳಲ್ಲಿ ಮಾಲೀಕರು ಮನೆ ಕಟ್ಟುವ ಉದ್ದೇಶವೂ ಕಾಣುತ್ತಿಲ್ಲ. ಈ ಮನೆಗಳು ಆಗುವವರೆಗೂ ಈಗ ಮನೆ ಕಟ್ಟಿಕೊಂಡವರಿಗೆ ಪಾಲಿಕೆಯಿಂದ ಸೂಕ್ತ ಸೌಲಭ್ಯ ಸಿಗದಂತಾಗಿದೆ. ಹೀಗಾಗಿ ಮನೆ ಕಟ್ಟಿಕೊಳ್ಳದ ಮಾಲೀಕರಿಂದ ಜಾಗವನ್ನು ಸರಕಾರ ಸುಪರ್ದಿಗೆ ತೆಗೆದುಕೊಂಡು ಮನೆ ಕಟ್ಟುವ ಆಸಕ್ತಿ ಇರುವವರಿಗೆ ನೀಡಬೇಕು. ಇಲ್ಲವೇ ಮನೆ ಕಟ್ಟಿಕೊಳ್ಳದ ಮಾಲೀಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನಾದರೂ ಮಾಡಬೇಕು. ಷರತ್ತು ಸಡಿಲಿಕೆ ಮಾಡಿ ಶಾಂಭವಿ ನಗರಕ್ಕೆ ಮೂಲಸೌಲಭ್ಯ ನೀಡಲು ಪಾಲಿಕೆ ಮುಂದಾಗಬೇಕೆಂಬುದು ನಿವಾಸಿಗಳ ಒತ್ತಾಸೆ.
1998ರಲ್ಲಿ 1 ಲಕ್ಷ ರೂ. ಕೊಟ್ಟು ಪ್ಲಾಟ್ ತೆಗೆದುಕೊಂಡೆ. 2003ರಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಆದರೆ ಈಗ ಪ್ಲಾಟ್ ತೆಗೆದುಕೊಂಡವರು ಮನೆ ಕಟ್ಟದೇ ಇರುವ ಕಾರಣ ನಾವು ತೊಂದರೆ ಅನುಭವಿಸುತ್ತಿದ್ದು, ನಗರದಲ್ಲಿ ಇದ್ದರೂ ಸಹ ಕಾಡಿನಲ್ಲಿ ವಾಸ ಮಾಡುವಂತಾಗಿದೆ. ಪಾಲಿಕೆಯು ನಗರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. -ಯಲ್ಲಪ್ಪ ಸಮಗಾರ, ಶಾಂಭವಿ ನಗರ ನಿವಾಸಿ
ಶಾಂಭವಿ ನಗರಕ್ಕೆ ಬೇಕಾದ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. – ಸುರೇಶ ಇಟ್ನಾಳ, ಆಯುಕ್ತ, ಹು-ಧಾ ಪಾಲಿಕೆ
-ಶಶಿಧರ್ ಬುದ್ನಿ