Advertisement

ನೆಮ್ಮದಿ ಕೆಡಿಸಿದ ಕೆಡಿಸಿದ ಒಳಚರಂಡಿ ಕಾಮಗಾರಿ

04:42 PM Oct 06, 2018 | |

ಲಕ್ಷ್ಮೇಶ್ವರ: ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ ಅದು ಅಧಿಕಾರಿಗಳ, ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಕಾಮಗಾರಿಗಳ ಹೆಸರಿನಲ್ಲಿ ಜನರಿಗೆ ತೊಂದರೆ ಜೊತೆಗೆ ಸರ್ಕಾರದ ಹಣ ಪೋಲಾಗುತ್ತಿದೆ. ಇದಕ್ಕೆ ಪಟ್ಟಣದಲ್ಲಿ ಕಳೆದ ಎರಡೂವರೆ ವರ್ಷಗಳಿಂದ 40 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯೇ ಉದಾಹರಣೆ.

Advertisement

ಒಳಚರಂಡಿ ಕಾಮಗಾರಿ ಪ್ರಾರಂಭವಾದ ಎರಡೂವರೆ ವರ್ಷದಿಂದ ಪಟ್ಟಣದಲ್ಲಿನ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ನಿರ್ಮಾಣ ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಮಧ್ಯದಲ್ಲಿಯೇ ಅಗೆದು ಚರಂಡಿ ನಿರ್ಮಿಸಲು, ಪೈಪ್‌ ಹಾಕಲು, ಮುಚ್ಚಲು ತಿಂಗಳುಗಟ್ಟಲೆ ಕಾಲ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜನತೆ ಕುಡಿಯುವ ನೀರು, ಸಂಚಾರದ ಜತೆ ಸಾಕಷ್ಟು ತೊಂದರೆ ಅನುಭವಿಸುವುದು ಸಾಮಾನ್ಯ. ಮುಖ್ಯವಾಗಿ ಯೋಜನೆಯ ನಿಯಮದಂತೆ ಕಾಮಗಾರಿಯ ಪೂರ್ವದಲ್ಲಿ ರಸ್ತೆಗಳು ಯಾವ ಸ್ಥಿತಿಯಲ್ಲಿದ್ದವೂ ಆ ಸ್ಥಿತಿಗೆ ರಸ್ತೆಗಳನ್ನು ನಿರ್ಮಿಸಬೇಕು ಎಂದಿದ್ದರೂ ಅಗೆದ ಮಣ್ಣನ್ನು ಹಾಕಿ ಕೈ ತೊಳೆದುಕೊಂಡಿದ್ದರಿಂದ ಮಳೆಯಾದರೆ ಕೆಸರು, ಬಿಸಿಲು ಬಿದ್ದರೆ ಧೂಳು ಸಮಸ್ಯೆಯಿಂದ ನಾಗರಿಕರು ಹಿಡಿಶಾಪ ಹಾಕುವಂತಾಗಿದೆ.

ಒಂದೆಡೆ ಕಾಮಗಾರಿ ಪ್ರಾರಂಭವಾಗಿದ್ದರೂ ಹಿಂದಿನಿಂದ ಮಾಡಿದ ಕಾಮಗಾರಿಗಳು ಕಳಪೆಯಿಂದ ಹಾಳಾಗುತ್ತಿರುವುದು ದುರ್ದೈವದ ಸಂಗತಿ. ನಿರ್ಮಾಣಗೊಂಡ ಚೆಂಬರ್‌ಗಳು ಒಡೆದು ಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಸವಣೂರ ರಸ್ತೆಯ ಉಪನಾಳ ನಗರ, ವಿನಾಯಕ ನಗರ, ಈಶ್ವರ ನಗರ, ಸೊಪ್ಪಿನಕೇರಿ, ಇಂದಿರಾ ನಗರ, ಹಿರೇಬಣ, ಬಸ್ತಿಬಣ ಸೇರಿ ಬಹುತೇಕ ಕಡೆ ಚೆಂಬರ್‌ ಗಳು ಕಿತ್ತು ಕಿನಾರೆ ಸೇರಿವೆ. ಕೆಲ ಕಡೆ ವಾಹನ ಸಂಚಾರ ಸ್ಥಗಿತಗೊಂಡಿವೆ. ಅಲ್ಲದೇ ಇದೀಗ ಪಟ್ಟಣದುದ್ದಕ್ಕೂ ಕೇವಲ ಚೆಂಬರ್‌ ಮಾತ್ರ ಅಳವಡಿಸಿದ್ದು, ಮನೆಗಳ ಬಳಕೆಯ ನೀರು ಬಂದು ಸೇರಲು ಪ್ರತೇಕ ಪೈಪ್‌ ಅಳವಡಿಸುವ ಕಾರ್ಯ ಸಂಪೂರ್ಣ ಬಾಕಿಯಿದೆ. ಅದಕ್ಕಾಗಿ ಪ್ರತ್ಯೇಕ 10 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಉಳಿದಂತೆ ಇಲೆಕ್ಟ್ರಿಕಲ್‌ ಕಾರ್ಯಕ್ಕೆ ಬೇರೆ ಟೆಂಡರ್‌ ಕರೆಯಲಾಗುತ್ತದೆಯಂತೆ. ಒಟ್ಟಿನಲ್ಲಿ ಕಾಮಗಾರಿಗಾಗಿ ನೀರಿನಂತೆ ಹಣ ಹರಿದು ಬಂದಿದ್ದರೂ ಕಾಮಗಾರಿ ಮಾತ್ರ ಪಟ್ಟಣದ ಯಾವೊಬ್ಬ ಪ್ರಜೆಗೂ ಸಮಾಧಾನ ತಂದಿಲ್ಲ. ಇದು ಪೂರ್ಣ ಪ್ರಮಾಣದಲ್ಲಿ ವಿಫಲವಾಗುವ ಮಾತುಗಳೇ ಕೇಳಿ ಬರುತ್ತಿವೆ.

ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಅನೇಕ ಬಾರಿ ಸಾಮಾನ್ಯ ಸಭೆಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ವಿವಿಧ
ಸಂಘಟನೆಗಳು ಉಗ್ರವಾದ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ವಾರ್ಡ್‌ ವಾಸ್ತವ್ಯದಲ್ಲಿ ಈ ಬಗ್ಗೆ ಸಾರ್ವಜನಿಕರು ಗಮನ ಸಳೆದು ಯುಜಿಡಿಯ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿಗಳು ಸಭೆ ಕರೆದು ಸೂಚಿಸಿದ್ದಾರೆ. ಆದರೆ ಇದೆಲ್ಲದಕ್ಕೂ ಕ್ಯಾರೆ ಎನ್ನದಿರುವುದು ಗುತ್ತಿಗೆದಾರರ ಪ್ರಭಾವಕ್ಕೆ ಹಿಡಿದ ಕನ್ನಡಿಯಾಗಿದೆ.

Advertisement

ಏನಿದು ಕಾಮಗಾರಿ?
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಒಟ್ಟು 57.68 ಕಿ.ಮೀ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ 1,887 ಸಂಖ್ಯೆಯ ಆಳಗುಂಡಿ ನಿರ್ಮಾಣ, 8 ಮಿ.ಮೀ ವ್ಯಾಸದ 1 ವೆಲ್‌ವೆಟ್‌ (ಕಿರಿದಾದ ಗುಂಡಿ), 5.50 ಎಂಎಲ್‌ಡಿ (ಮಿಲಿಯನ್‌ ಲೀಟರ್‌ ಡೇಲಿ) ಸಾಮರ್ಥ್ಯದ ಮಲೀನ ನೀರು ಶುದ್ಧೀಕರಣ ಘಟಕದ ಯೋಜನೆಗೆ 28.16 ಕೋಟಿ ರೂ.ಗೆ ವಿಜಾಪುರದ ಗುತ್ತಿಗೆದಾರರಿಗೆ ಟೆಂಡರ್‌ ಮಂಜೂರು ಮಾಡಲಾಗಿತ್ತು. 2016ರಲ್ಲಿ ಮೊದಲ ಹಂತದಲ್ಲಿ 18 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲಾಯಿತು. ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರರು ಹೆಚ್ಚುವರಿ ಅನುದಾನಕ್ಕೆ ಶಿಫಾರಸು ಮಾಡಲಾಗಿ ಮರು ಅಂದಾಜು ಯೋಜನಾ ವೆಚ್ಚದ ಪ್ರಕಾರ ಇದೀಗ 40 ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ಕಾಮಗಾರಿ ವೇಗ ಮಾತ್ರ ತೀವ್ರತೆ ಪಡೆಯುತ್ತಿಲ್ಲ. ಅಲ್ಲದೆ ಕೈಗೊಂಡ ಕಾಮಗಾರಿ ಕಳಪೆ, ಅವೈಜ್ಞಾನಿಕ ಹಾಗೂ ನಿರ್ಲಕ್ಷ್ಯದಿಂದ ಕುಂಟುತ್ತಾ ಸಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮೇಲ್ವಿಚಾರಣೆ ಕೊರತೆಯಿಂದ ಗುತ್ತಿಗೆದಾರರರು ಆಡಿದ್ದೇ ಆಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next