ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಸಿಬ್ಬಂದಿ ಕೊರತೆಯಿಂದಾಗಿ ಮೂತ್ರಪಿಂಡ ಸಮಸ್ಯೆ ಯಿರುವ ರೋಗಿಗಳಿಗೆ ಅಗತ್ಯವಿರುವ ಡಯಾಲಿಸಿಸ್ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ವಾರಕ್ಕೆ 3 ದಿನ ಡಯಾಲಿಸಿಸ್ ಮಾಡಿಸಬೇಕು. ಆದರೆ ಎರಡು ಬಾರಿ ಮಾಡಿದರೆ ಹೆಚ್ಚು.
ವಾರದ ಹಿಂದೆ ಡಯಾಲಿಸಿಸ್ ಮಾಡುವವರಿಲ್ಲದೇ ದೇವನಹಳ್ಳಿ ಆಸ್ಪತ್ರೆಗೆ ಹೋಗಿ ಬರಬೇಕಾಯಿತು ಎಂದು ಕೇಶವಮೂರ್ತಿ, ಸದಾಶಿವಯ್ಯ ದೂರಿದರು. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಆರಂಭವಾದಾಗಿನಿಂದ ಇಲ್ಲಿಯೇ ಮಾಡಿಸಿಕೊಳ್ಳುತ್ತಿದ್ದೇವೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ನರಳಾಡುವಂತಾಗಿದೆ. ನಿರ್ವಾಹಕರು ಏಕಾಏಕಿ ಖಾಸಗಿ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ.
ಸಾವಿರಗಟ್ಟಲೇ ಹಣ ಎಲ್ಲಿಂದ ತರುವುದು ಎಂದು ಲವಕುಮಾರ್, ವಿಶಾಲಾಕ್ಷಿ ಅಳಲು ತೋಡಿಕೊಂಡರು. ಒಂದೂವರೆ ತಿಂಗಳಿನಿಂದ ಮೂತ್ರಪಿಂಡ ಸಮಸ್ಯೆಯಿದ್ದು, ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡದ ಕಾರಣ 30ಕ್ಕೂ ಹೆಚ್ಚು ರೋಗಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆಯಿಲ್ಲದೇ ಮೂವರು ಸಾವನ್ನಪ್ಪಿದ್ದಾರೆ.
ಗುತ್ತಿಗೆದಾರರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವಂತೆ ಆಸ್ಪತ್ರೆ ಆಡಳಿತಾಧಿಕಾರಿಗಳು ತಾಕೀತು ಮಾಡಬೇಕಿದೆ ಎಂದು ಕರವೇ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷ ಮರುಳಾರಾಧ್ಯ ಒತ್ತಾಯಿಸಿದ್ದಾರೆ. ಡಯಾಲಿಸಿಸ್ ಚಿಕಿತ್ಸೆ ಹೊರ ಗುತ್ತಿಗೆ ನೀಡಲಾಗಿದ್ದು, ಸಿಬ್ಬಂದಿ ಏಕಾಏಕಿ ರಜೆ ಹಾಕಿರುವುದು ಸಮಸ್ಯೆಗೆ ಕಾರಣವಾಗಿದೆ. ಜತೆಗೆ ತಜ್ಞರ ಅವಶ್ಯವಿದ್ದು, ನೇಮಕಕ್ಕೆ ಸೂಚಿಸಲಾಗಿದೆ.
ಈಗ ಮತ್ತೂಬ್ಬ ತಜ್ಞನ ವ್ಯವಸ್ಥೆ ಮಾಡಿ, ರೋಗಿಗಳಿಗೆ ತ್ವರಿತ ಚಿಕಿತ್ಸೆ ನೀಡಲಾಗುವುದು ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.