Advertisement

ಗ್ರಾಮಸ್ಥರ ಸಮಸ್ಯೆ ಸ್ಥಳದಲ್ಲೇ ಇತ್ಯರ್ಥ

05:59 PM Mar 20, 2022 | Team Udayavani |

ಕೊಪ್ಪಳ: ಜನರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆಗೆ ಎನ್ನುವ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು, ಈಗ ಜಿಲ್ಲಾಧಿಕಾರಿಗಳೇ ನಿಮ್ಮೂರಿಗೆ ಬಂದಿದ್ದಾರೆ. ನಿಮ್ಮಲ್ಲಿನ ವೈಯಕ್ತಿಕ-ಸಾಮುದಾಯಿಕ ಸಮಸ್ಯೆಗಳ ಬಗ್ಗೆ ಅರ್ಜಿ ಕೊಟ್ಟು ಸ್ಥಳದಲ್ಲಿಯೇ ಇತ್ಯರ್ಥಪಡಿಸಿಕೊಳ್ಳಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ತಾಲೂಕಿನ ಹೂವಿನಹಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಈ ಹಿಂದೆ ಜನರು ಕಂದಾಯ ಸೇರಿ ಇತರೆ ದಾಖಲೆಗಳನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗೆ ನಿತ್ಯ ಅಲೆದಾಡಬೇಕಿತ್ತು. ಕೆಲ ಮಾನವೀಯತೆಯುಳ್ಳ ಅಧಿ ಕಾರಿಗಳು ಸ್ಪಂದಿಸುತ್ತಿದ್ದರು. ಆದರೆ ಹಲವರು ಇದಕ್ಕೆ ಸ್ಪಂದಿಸುತ್ತಿರಲಿಲ್ಲ. ಇದೆಲ್ಲವನ್ನು ಮನಗಂಡು ಸರ್ಕಾರವೇ ಜಿಲ್ಲಾಧಿಕಾರಿಗಳನ್ನು ಗ್ರಾಮಗಳಲ್ಲಿ ವಾಸ್ತವ್ಯ ಮಾಡಲು ಕಳುಹಿಸುತ್ತಿದೆ. ಇದರಿಂದ ಅವರು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಿದ್ದಾರೆ. ಜನರು ಸರ್ಕಾರಿ ಕಚೇರಿಗೆ ಅಲೆದಾಟ ತಪ್ಪಿಸಲು ಗ್ರಾಮವಾಸ್ತವ್ಯ ನಡೆಯುತ್ತಿದೆ. ಜನರು ಇದರ ಸದ್ಭಳಕೆ ಮಾಡಿಕೊಳ್ಳಿ ಎಂದರು. ಸರ್ಕಾರ ಜನರಿಗೆ ಸೌಲಭ್ಯ ಸುಲಭವಾಗಿ ಸಿಗುವಂತೆ ಮಾಡಲು ಗ್ರಾಮ ಒನ್‌ ಯೋಜನೆ ಜಾರಿ ಮಾಡಿದೆ. ಹೀಗಾಗಿ ಜನರು ನಿಮ್ಮೂರಿನಲ್ಲಿಯೇ ದಾಖಲೆ ಪಡೆಯಲು ಅನುಕೂಲವಾಗಲಿದೆ ಎಂದರು.

ಇಂದು ಡಿಜಿಟಲ್‌ ಯುಗವಾಗಿದೆ. ಸರ್ಕಾರದ ಯೋಜನೆಗಳ ಅನುದಾನ ಎಲ್ಲಿಯೂ ಸೋರಿಕೆಯಾಗದಿರಲಿ ಎನ್ನುವ ಕಾರಣಕ್ಕೆ ಆಧಾರ್‌ ಲಿಂಕ್‌ ಮಾಡಲಾಗುತ್ತಿದೆ. ಇದರಿಂದ ಅಕ್ರಮ, ನಕಲು ತಡೆಯಲು ಸಾಧ್ಯ. ಇದಕ್ಕೆ ಪ್ರಧಾನಿಗಳು ಹೆಚ್ಚು ಒತ್ತು ನೀಡಿದ್ದಾರೆ. ಎಲ್ಲದರಲ್ಲೂ ಡಿಜಿಟಲ್‌ ತಂತ್ರಜ್ಞಾನ ತಂದಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಿ, ಹನಿ ನೀರಾವರಿ ಸೌಲಭ್ಯ ಪಡೆಯಿರಿ. ಈರುಳ್ಳಿ ಘಟಕ ಸ್ಥಾಪನೆ ಮಾಡಿ. ಕಡಿಮೆ ಜಮೀನಿನಲ್ಲಿ ಸಮಗ್ರ ಬೆಳೆ ಬೆಳೆಯುವ ವೈಜ್ಞಾನಿಕತೆ ಅಳವಡಿಸಿಕೊಳ್ಳಿ ಎಂದರು.

ಜಿಪಂ ಸಿಇಒ ಫೌಜಿಯಾ ತರನ್ನಮ್‌, ಎಸಿ ಬಸವಣ್ಣೆಪ್ಪ ಕಲ್ಲಶೆಟ್ಟಿ, ತಾಪಂ ಇಒ ಕೆ.ಎಂ.ಮಲ್ಲಿಕಾರ್ಜುನ, ತಹಶೀಲ್ದಾರ್‌ ಅಮರೇಶ ಬಿರಾದಾರ್‌, ಗ್ರಾಪಂ ಅಧ್ಯಕ್ಷ ಪಾರ್ವತೆಮ್ಮ ಕುರಿ ಸೇರಿ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next