Advertisement
ಆಜ್ರಿ ಗ್ರಾಮದಲ್ಲಿರುವ ಚೋನಮನೆ ಶ್ರೀ ಶನೈಶ್ಚರ ದೇವಸ್ಥಾನದ ಸಮೀಪವಿರುವ ನದಿಗೆ ಅಡ್ಡಲಾಗಿ ಸುಮಾರು 1.60 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟುವಿನಲ್ಲಿ ಅರ್ಧದವರೆಗೆ ಮಾತ್ರ ಹಲಗೆ ಅಳವಡಿಸಿದ್ದಾರೆ. ಈಗ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಇದರಿಂದ ಆಜ್ರಿ, ತಗ್ಗುಂಜೆ,ಬೆಳುವಾಣ, ಚೋನಮನೆ, ಗೂಂಜಾಡಿ, ಹೊಸಬಾಳು ಭಾಗದ ಸುಮಾರು 300 ಎಕರೆ ಕೃಷಿ ಭೂಮಿಗೆ ನೀರು ಪೂರೈಕೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ ಎನ್ನುವುದು ಇಲ್ಲಿನ ರೈತರ ಅಭಿಪ್ರಾಯ.
ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿದ್ದರೂ, ನೀರು ಕೆಳಕ್ಕೆ ಸೋರಿಕೆಯಾಗುತ್ತಿರುವುದು. ಕಿರು ವಿದ್ಯುತ್ ಯೋಜನೆ
ಭವಿಷ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ನೀರು ಸಂಗ್ರಹವಾದರೆ ಈ ಭಾಗದ ಸುತ್ತಮುತ್ತಲಿನ ಹಳ್ಳಿ ಪ್ರದೇಶಕ್ಕೆ ಅನುಕೂಲವಾಗುವಂತೆ ಕಿರು ವಿದ್ಯುತ್ ಯೋಜನೆಯನ್ನು ಕೂಡ ಆರಂಭಿಸಬಹುದು. ಈ ಸಂಬಂಧ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರಾದ ರಾಜೀವ್ ಶೆಟ್ಟಿ.
Related Articles
ಆಜ್ರಿಯಿಂದ ಚೋನಮನೆ – ಕಮಲಶಿಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಇಲ್ಲೊಂದು ಕಿಂಡಿ ಅಣೆಕಟ್ಟು ನಿರ್ಮಿಸಬೇಕು ಎನ್ನುವ ಬೇಡಿಕೆ 2 ದಶಕದ ಹಿಂದಿನದ್ದು. ಶ್ರೀ ಶನೈಶ್ಚರ ದೇವಸ್ಥಾನದ ಆಡಳಿತ ಧರ್ಮದರ್ಶಿ ಚೋನಮನೆ ಅಶೋಕ ಶೆಟ್ಟಿ ನೇತೃತ್ವದಲ್ಲಿ ಸೇತುವೆಗಾಗಿ ಹೋರಾಟವು ನಡೆದಿತ್ತು. ಕಳೆದ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ, ಹಿಂದಿನ ಶಾಸಕ ಗೋಪಾಲ ಪೂಜಾರಿ ಮುತುವರ್ಜಿಯಲ್ಲಿ 1.60 ಕೋ.ರೂ. ಅನುದಾನ ಮಂಜೂರಾಗಿ, ಈಗ ಕಾಮಗಾರಿಯೂ ಮುಗಿದಿದೆ.
Advertisement
ಇದ್ದ ಹಲಗೆಯಿಂದಲೂ ಸೋರಿಕೆಈಗ ಅರ್ಧದವರೆಗೆ ಹಲಗೆ ಅಳವಡಿಸಲಾಗಿದೆ. ಆದರೆ ಈಗ ಅಳವಡಿಸಿರುವ ಹಲಗೆಯ ಕೆಳಗ್ಗಿನಿಂದ, ಮಧ್ಯದಲ್ಲಿ ಸರಿಯಾಗಿ ಹಲಗೆ ಅಳವಡಿಸದ ಕಾರಣ ಅಲ್ಲಿ ನೀರು ಸೋರಿಕೆಯಾಗಿ, ಕೆಳಗೆ ಹರಿಯುತ್ತಿದೆ. ಸೋರಿಕೆ ನಿಲ್ಲಿಸಿ
ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಆದರೆ ಈಗ ಈ ಕಿಂಡಿ ಅಣೆಕಟ್ಟು ನಿರ್ಮಾಣವಾದರೂ, ಅಲ್ಲಿಗೆ ಪೂರ್ತಿ ಮೇಲಿನವರೆಗೆ ಹಲಗೆ ಅಳವಡಿಸಿಲ್ಲ. ಅದಲ್ಲದೆ ಈಗ ಅಳವಡಿಸಿರುವ ಹಲಗೆಯ ಅಡಿಯಿಂದ, ಮಧ್ಯದಿಂದ ನೀರು ಕೆಳಕ್ಕೆ ಸೋರಿಕೆಯಾಗುತ್ತಿದೆ. ಇದರಿಂದ ಕಿಂಡಿ ಅಣೆಕಟ್ಟು ನಿರ್ಮಿಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಈ ಭಾಗದ ಅನೇಕ ರೈತರು ಇದೇ ನೀರನ್ನು ಕೃಷಿಗೆ ಆಶ್ರಯಿಸಿದ್ದಾರೆ.
– ಚೋನಮನೆ ಅಶೋಕ ಶೆಟ್ಟಿ, ಸ್ಥಳೀಯರು ಹೊಸದಾಗಿ ಹಲಗೆ ಅಳವಡಿಕೆ
ನಾನು ಕಳೆದವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈಗ ಅಳವಡಿಸಿರುವ ಹಲಗೆ ಸರಿಯಾಗದ ಕಾರಣ ಅದನ್ನು ತೆಗೆದು, ಹೊಸದಾಗಿ ಅಳವಡಿಸಲು ಸೂಚಿಸಲಾಗಿದೆ. ನೀರಿನ ಹರಿವು ಹೆಚ್ಚಾಗಿರುವುದರಿಂದ ಈಗ ಪೂರ್ತಿಯಾಗಿ ಅಳವಡಿಸಲು ಸಾಧ್ಯವಾಗುತ್ತಿಲ್ಲ.
– ಸುರೇಂದ್ರ ಎಸ್., ಎಇಇ, ಸಣ್ಣ ನೀರಾವರಿ ಇಲಾಖೆ ಉಡುಪಿ — ಪ್ರಶಾಂತ್ ಪಾದೆ