Advertisement

ಮಳೆಗಾಲದಲ್ಲೂ ಕುಡಿವ ನೀರಿಗೆ ಬರ!

04:19 PM Sep 12, 2022 | Team Udayavani |

ಕುಮಟಾ: ಬಿರು ಬೇಸಿಗೆಯಲ್ಲಿ ಎಲ್ಲೆಡೆ ನೀರಿಗೆ ಬರ ಸಹಜ. ಆದರೆ ತಾಲೂಕಿನ ದೀವಗಿ ನವಗ್ರಾಮದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಎಡಬಿಡದೆ ಸುರಿಯುವ ಮಳೆಯಲ್ಲೂ ಕುಡಿಯುವ ನೀರಿಗೆ ಬರದ ಛಾಯೆ ಆವರಿಸಿದೆ.

Advertisement

ನವಗ್ರಾಮ ಅತೀ ಎತ್ತರದ ಪ್ರದೇಶದಲ್ಲಿದ್ದು, ಸುಮಾರು 60-70 ರಷ್ಟು ಮನೆಗಳಿವೆ. ಇಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕದ ಮೂಲಕ ಪಂಚಾಯತನಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಅದು ಕೂಡ ಶೇಡಿ ಮಣ್ಣು ಮಿಶ್ರಿತ ನೀರು. ಇದೇ ನೀರನ್ನು ಇಲ್ಲಿನ ಜನ ನಂಬಿದ್ದಾರೆ. ಆದರೆ ಹಲವು ಬಾರಿ ವಿದ್ಯುತ್‌ ಸಮಸ್ಯೆ, ಪೈಪ್‌ ಸೋರುವಿಕೆ, ಪಂಪ್‌ಸೆಟ್‌ ದುರಸ್ತಿ ಸೇರಿದಂತೆ ಅನೇಕ ಕಾರಣಗಳಿಂದ ಕೆಲವೊಮ್ಮೆ ನೀರು ಪೂರೈಸುವುದಿಲ್ಲ. ಈ ವೇಳೆ ಗ್ರಾಮಸ್ಥರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ಇನ್ನು ಕೆಲವರು 400 ರಿಂದ 450 ರೂ.ಗಳನ್ನು ನೀಡಿ ವಾಹನದ ಮೂಲಕ ನೀರನ್ನು ತರಿಸಿಕೊಳ್ಳುತ್ತಾರೆ. ಆದರೆ ಇದು ಬಹುತೇಕ ಬಡವರಿಂದ ಸಾಧ್ಯವಿಲ್ಲದ ಮಾತು. ಹೀಗಾಗಿ ದೂರದ ಬಾವಿಗಳಿಂದ ನೀರು ತರುವ ಪರಿಸ್ಥಿತಿ ಇದೆ. ಆ ನಂತರ ಸೂಚನೆ ಮೇರೆಗೆ ಮನೆಗೆ ತಲಾ 5 ಕೊಡ ನೀರು ಪೂರೈಸಿದ್ದಾರೆ.

ಅಷ್ಟೇ ಅಲ್ಲದೇ ಎರಡು ದಿನಗಳಿಗೊಮ್ಮೆ ಪೂರೈಕೆಯಾಗುವ ನೀರನ್ನು ಪ್ರತಿನಿತ್ಯ ಪೂರೈಸಲು ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ತಿಂಗಳಿನ 30 ದಿನದಲ್ಲಿ ಎರಡು ದಿನಕ್ಕೊಮ್ಮೆಯಂತೆ 15 ದಿನ ನೀರಿನ ಪೂರೈಕೆ ಆಗುತ್ತದೆ. ಅದರಲ್ಲಿ ಎರಡು ಬಾರಿ ಪೈಪ್‌ ತುಂಡಾಗಿ, ಮಷಿನ್‌ ಹಾಳಾಗಿ ಒಂದರ ದುರಸ್ತಿಗೆ 4 ದಿನ ತೆಗೆದುಕೊಂಡು, 8 ದಿನಗಳ ಕಾಲ ದುರಸ್ತಿಯಲ್ಲಿ ಕಳೆದು ಹೋಗಿದೆ. ಇನ್ನುಳಿದ 7 ದಿನಗಳ ನೀರು ಇಡೀ ತಿಂಗಳು ಬಳಕೆ ಮಾಡಬೇಕು. ಇದು ಹೇಗೆ ಸಾಧ್ಯ ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಕುಡಿಯುವ ನೀರಿನ ಬದಲಿ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಗ್ರಾಮಸ್ಥರು ದೂರದಿಂದ ಒಂದೆರಡು ಕೊಡಗಳಷ್ಟು ನೀರನ್ನು ತೆಗೆದುಕೊಂಡು ಬಳಸುತ್ತಿದ್ದು, ನೀರಿನ ಸಮಸ್ಯೆ ಎದುರಿಸುತ್ತಿದ್ದರು. ನಾಲ್ಕನೇ ದಿನ ಇದೇ ರೀತಿ ಮುಂದುವರೆದಾಗ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿ ಸಮಸ್ಯೆ ಬಗೆಹರಿಸಲು ಕೋರಿದ್ದಾರೆ.

ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ, ನವಗ್ರಾಮದಲ್ಲಿ ಈಗಿರುವ ಓವರ್‌ ಹೆಡ್‌ ಟ್ಯಾಂಕ್‌ನ ನೀರನ್ನು ದಿನಬಳಕೆಗೆ ಬಳಸಿ, ಕುಡಿಯುವ ನೀರಿಗಾಗಿ ಇನ್ನೊಂದು ಬೋರ್‌ ಮೂಲಕ ಈ ಮೊದಲು ಬಳಸುತ್ತಿದ್ದ ಎಲ್ಲ ಹಳೆಯ ನೀರಿನ ಟ್ಯಾಂಕ್‌ಗಳ ಮೂಲಕ ಪೂರೈಸಲಾಗುವುದು. ಜೊತೆಗೆ ಹಳೆಯ ಟ್ಯಾಂಕ್‌ಗಳನ್ನು ಪರಿಶೀಲಿಸಿ, ಸ್ವತ್ಛಗೊಳೊಸಿ ಪುನಃ ಅವುಗಳಿಗೆ ನೀರಿನ ಸಂಪರ್ಕ ಕಲ್ಪಿಸುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕುಡಿಯುವ ನೀರಿಗಾಗಿ ಟ್ಯಾಂಕ್‌ಗೆ ಪ್ರತಿದಿನ ನೀರನ್ನು ಪೂರೈಕೆ ಮಾಡಿ ಮನೆ ಸಂಪರ್ಕದ ನಲ್ಲಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಸುವಂತೆ ಸೂಚಿಸಿದರು.

ಓಟ್ಟಾರೆ ನಾಲ್ಕು ದಿನಗಳಿಂದ ನೀರಿಗಾಗಿ ಪರದಾಡುತ್ತಿದ್ದ ನವಗ್ರಾಮದ ಗ್ರಾಮಸ್ಥರಿಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂಬುದು ಕಾದು ನೋಡಬೇಕಿದೆ.

ಬೊರ್‌ವೆಲ್‌ನಿಂದ ನೀರನ್ನು ಪಂಪ್‌ ಮಾಡಿ ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ಮನೆಗಳಿಗೆ ನೀರು ಸರಬರಾಜಾಗುತ್ತದೆ. ಆದರೆ ಪಂಪ್‌ ಕೆಟ್ಟು ಹೋದ ಕಾರಣ ನೀರು ಪೂರೈಕೆಯಾಗಿರಲಿಲ್ಲ. ಇದೀಗ ಸರಿಪಡಿಸಲಾಗಿದ್ದು ಎಂದಿನಂತೆ ನೀರು ಪೂರೈಕೆಯಾಗಲಿದೆ. -ರೇಖಾ ನಾಯಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next