ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿನ ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೆರವು ನೀಡಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ (ನವೆಂಬರ್ 04) ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಅಭಿವೃದ್ಧಿಯಾಗಲಿದೆ ಬಿಜೈ ಕೆ.ಎಸ್.ಆರ್.ಟಿ.ಸಿ. ಜಂಕ್ಷನ್; ಸುಗಮ ವಾಹನ ಸಂಚಾರಕ್ಕೆ ಅನುಕೂಲ
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 450ರ ಗಡಿ ದಾಟಿದ್ದು, ವಾಯು ಮಾಲಿನ್ಯ ಗಂಭೀರ ಮಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಕೇಜ್ರಿವಾಲ್ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಯು ಮಾಲಿನ್ಯ ಸಮಸ್ಯೆ ಕೇವಲ ದೆಹಲಿಯಲ್ಲಿ ಮಾತ್ರವಲ್ಲ, ಉತ್ತರ ಭಾರತದಲ್ಲಿಯೂ ಇದೆ. ಈ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮರ್ಪಕ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ವಿನಂತಿಸಿಕೊಂಡಿದ್ದಾರೆ.
ವಾಯು ಮಾಲಿನ್ಯಕ್ಕೆ ಪಂಜಾಬ್ ಮತ್ತು ದೆಹಲಿ ಸರ್ಕಾರ ಮಾತ್ರವೇ ಹೊಣೆಯಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಇದು ಒಬ್ಬರತ್ತ ಕೈಬೆರಳು ತೋರಿಸಿ ಆರೋಪಿಸುವ ಸಮಯವಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನು ರಾಜಕೀಯಗೊಳಿಸಬಾರದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯ ವಾಯು ಗುಣಮಟ್ಟ ತೀವ್ರ ಹದಗೆಟ್ಟಿದ್ದು, ನಗರದ ವಾಯುಗುಣಮಟ್ಟ ಸೂಚ್ಯಂಕ( ಎಕ್ಯೂಐ) 472ಕ್ಕೆ ಏರಿಕೆಯಾಗಿದೆ. ನೋಯ್ಡಾದಲ್ಲಿ 562, ಘಾಜಿಯಾಬಾದ್ 407 ಹಾಗೂ ದೆಹಲಿಯ ದೀರ್ಪುರ್ ಪ್ರದೇಶದಲ್ಲಿ ಎಕ್ಯೂಐ 512ಕ್ಕೆ ತಲುಪಿದೆ ಎಂದು ವರದಿ ವಿವರಿಸಿದೆ.