Advertisement
ಹೊಸ ಪಡಿತರ ಚೀಟಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ಜ. 31ರಿಂದ ಆರಂಭಿಸ ಲಾಗಿತ್ತು. ಅರ್ಜಿಗಳ ಪರಿಶೀಲನೆಯನ್ನು ಮೊದಲಿಗೆ ಗ್ರಾ.ಪಂ. ಮಟ್ಟದಲ್ಲಿ ಆಯಾ ಪಿಡಿಒಗಳಿಗೆ ನೀಡಲಾಗಿತ್ತು. ಒಂದು ಅರ್ಜಿ ಪರಿಶೀಲನೆಗೆ 20 ರೂ. ಪ್ರೋತ್ಸಾಹಧನವನ್ನೂ ನೀಡಲು ಆಹಾರ ಇಲಾಖೆ ನಿರ್ಧರಿಸಿತ್ತು. ಆದರೆ, ಕಾರ್ಯ ಒತ್ತಡದ ಕಾರಣ ಹೇಳಿ ಪಿಡಿಒಗಳು ಅರ್ಜಿ ಪರಿಶೀಲನೆಯಿಂದ ಹಿಂದೆ ಸರಿದರು. ಬಳಿಕ ಈ ಹೊಣೆ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರ ಹೆಗಲಿಗೆ ಬಿತ್ತು. ಅವರೂ ಇದಕ್ಕೆ ಹಿಂದೇಟು ಹಾಕಿದ್ದಾರೆ. ಹೀಗಾಗಿ ಹೊಸ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ 8.64 ಲಕ್ಷ ಅರ್ಜಿಗಳಿಗೆ ಒಂದೂವರೆ ತಿಂಗಳಾದರೂ “ಮುಕ್ತಿ’ ಸಿಗುತ್ತಿಲ್ಲ. ಇದೀಗ ಈ ಸಮಸ್ಯೆ ಮುಖ್ಯಮಂತ್ರಿ ಅಂಗಳಕ್ಕೆ ತಲುಪಿದೆ.
Related Articles
ಆನ್‌ಲೈನ್ ಪಡಿತರ ಚೀಟಿಗಳ ಪರಿಶೀಲನೆ ವಿಚಾರದಲ್ಲಿ ಪಿಡಿಒಗಳು, ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ‘ಅಸಹಕಾರ’ ಧೋರಣೆ ತೋರಿದ್ದರಿಂದ ಅರ್ಜಿಗಳ ವಿಲೇವಾರಿಗೆ ಮುಂದೇನು ಮಾಡಬೇಕು ಎಂದು ಚರ್ಚಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಾ. 20ರಂದು ಸಂಜೆ ಸಭೆ ಕರೆದಿದ್ದಾರೆ. ಅರ್ಜಿ ಪರಿಶೀಲನೆ ಯಾರ ಹೆಗಲಿಗೆ ಬೀಳುತ್ತೋ ಬಿಪಿಎಲ್ ಕುಟುಂಬಗಳಿಗೆ ಎಷ್ಟು ಬೇಗ ಹೊಸ ಪಡಿತರ ಚೀಟಿ ಭಾಗ್ಯ ಸಿಗುತ್ತೋ ಸಭೆ ಬಳಿಕವೇ ಸ್ಪಷ್ಟವಾಗಲಿದೆ.
Advertisement
‘ಪಿಡಿಒಗಳಿಗೆ ಈಗಾಗಲೇ ಸಾಕಷ್ಟು ಕೆಲಸ ಇದೆ. ಅಲ್ಲದೇ ಚುನಾವಣೆಗಳು ಹತ್ತಿರ ಇರುವುದರಿಂದ ಹಳ್ಳಿಗಳಲ್ಲಿ ಬಿಪಿಎಲ್ ಕಾರ್ಡ್ ಕೊಡಿಸಲು ರಾಜಕಾರಣಿಗಳು ಪೈಪೋಟಿಗೆ ಬಿದ್ದಿರುತ್ತಾರೆ. ಅರ್ಹತೆ ಇಲ್ಲದಿದ್ದರೂ ತಮ್ಮವರಿಗೆ ಬಿಪಿಎಲ್ ಕಾರ್ಡ್ ಕೊಡಿ ಎಂದು ಕೆಲವರು ಹೇಳಿದರೆ, ಇಂತಹವರಿಗೆ ಕಾರ್ಡ್ ಯಾಕೆ ಕೊಟ್ಟಿರಿ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಾರೆ. ಇದರ ಪರಿಣಾಮವನ್ನು ಪಿಡಿಒಗಳು ಗ್ರಾಮಸಭೆಗಳಲ್ಲಿ ಅನುಭವಿಸಬೇಕಾಗುತ್ತದೆ. ಅದಕ್ಕೆ ಯಾವ ಕಾರಣಕ್ಕೂ ನಮ್ಮಿಂದ ಅರ್ಜಿ ಪರಿಶೀಲನೆ ಸಾಧ್ಯವಿಲ್ಲ.’– ಎಸ್. ರಮೇಶ್, ರಾಜ್ಯ ಪಿಡಿಒಗಳ ಸಂಘದ ಅಧ್ಯಕ್ಷ ‘ಗ್ರಾ.ಪಂ.ಗಳ ಆಡಳಿತ ಬಲವರ್ಧನೆ ಆಗಬೇಕು. ಹಳ್ಳಿ ಜನರಿಗೆ ಎಲ್ಲ ಸೌಲಭ್ಯಗಳೂ ಗ್ರಾ.ಪಂ. ಮೂಲಕವೇ ಸಿಗಬೇಕು. ಅದರಂತೆ, ಪಡಿತರ ಚೀಟಿ ಪರಿಶೀಲನೆ ಗ್ರಾ.ಪಂ. ಮಟ್ಟದಲ್ಲಿ ನಡೆಯಬೇಕು. ಆದರೆ, ಈ ಕೆಲಸ ಈಗಾಗಲೇ ಕೆಲಸದ ಒತ್ತಡ ಇರುವ ಪಿಡಿಒಗಳಿಂದ ಸಾಧ್ಯವಿಲ್ಲ. ಸರಕಾರ ಹೆಚ್ಚುವರಿ ಸಿಬಂದಿ ಒದಗಿಸಿ ಈ ಕೆಲಸ ಮಾಡಿಸಬೇಕು.’
– ಮಾರುತಿ ಮಾನ್ಪಡೆ, ಅಧ್ಯಕ್ಷರು, ಕರ್ನಾಟಕ ಗ್ರಾ.ಪಂ. ನೌಕರರ ಒಕ್ಕೂಟ – ರಫೀಕ್ ಅಹ್ಮದ್