ಬಳ್ಳಾರಿ: ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿ, ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳು ತುಂಬಿ ಹರಿಯುತ್ತಿವೆ. ಆದರೆ ಈ ನೀರನ್ನೇ ನೆಚ್ಚಿಕೊಂಡಿರುವ ಕಾಲುವೆ ಕೊನೆ ಭಾಗದ ರೈತರ ನೀರಿನ ಬವಣೆ ಮಾತ್ರ ತಪ್ಪುತ್ತಿಲ್ಲ. ಜಲಾಶಯ ತುಂಬದೆ ಕಳೆದ 3 ವರ್ಷದಿಂದ ನೀರಿಗಾಗಿ ಪರಿತಪಿಸಿದ್ದ ಕಾಲುವೆ ಕೊನೆಭಾಗದ ಜನ ಈ ಬಾರಿ ಜಲಾಶಯ ತುಂಬಿದ್ದರೂ ನೀರಿಗಾಗಿ ಪರದಾಡಬೇಕಿದೆ.
ಜಲಾಶಯದಿಂದ ಕಾಲುವೆಗೆ ಹರಿಸಿದ ನೀರನ್ನು ಅಕ್ರಮವಾಗಿ ಪಡೆಯೋದು ಒಂದೆಡೆಯಾದರೆ, ಉಪಕಾಲುವೆಗಳ ಬಾಗಿಲುಗಳನ್ನೇ ಕಿತ್ತೆಸೆದು, ಕೊನೆ ಭಾಗದ ರೈತರಿಗೆ ನೀರು ಹೋಗದಂತೆ ಎಲ್ಲವನ್ನೂ ಕಾಲುವೆಯ ಅಂಚಿನಲ್ಲಿರುವ ರೈತರೇ ಪಡೆಯುವುದು ಮತ್ತೂಂದು ಕಾರಣ. ಹೀಗಾಗಿ ಜಲಾಶಯದಲ್ಲಿ ನೀರಿದ್ದರೂ, ಇಲ್ಲದಿದ್ದರೂ, ಕೊನೆ ಭಾಗದ ರೈತರು ನೀರಿನ ಕೊರತೆಯಿಂದ ಮಾತ್ರ ಮುಕ್ತಗೊಳ್ಳುತ್ತಿಲ್ಲ.
ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗಿಲ್ಲ. ಮೇಲಾಗಿ ಬಳ್ಳಾರಿ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಮಳೆಯಾಶ್ರಿತ ರೈತರು ಈ ಬಾರಿ ಕಾಲುವೆ ನೀರನ್ನೇ ನೆಚ್ಚಿಕೊಂಡಿದ್ದಾರೆ. ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರೆ, ರೈತರು ಬಿತ್ತನೆ ಕಾರ್ಯ ಮುಗಿಸಿ ಬೆಳೆ ಮೊಳಕೆಯೊಡೆದ ಬಳಿಕ ಕಾಲುವೆಯಿಂದ ನೀರು ಪಡೆದು ತಮ್ಮ ಹೊಲಗಳಿಗೆ ಹಾಯಿಸುತ್ತಿದ್ದರು. ಆದರೆ, ಕಳೆದ ಜುಲೈ 20 ರಂದು ಕಾಲುವೆಗಳಿಗೆ ನೀರು ಹರಿಸಿದ್ದರೂ ಈವರೆಗೂ ಕೊನೇ ಭಾಗದ ಜಮೀನುಗಳಿಗೆ ನೀರು ತಲುಪಿಲ್ಲ.
ನೀರು ಇದ್ದರೂ ಬಿತ್ತನೆ ಮಾಡಲಾಗದ ಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ. ಜಲಾಶಯದಿಂದ ಆಂಧ್ರಕ್ಕೆ ನೀರು ಹರಿಯುವ ಎಚ್‌ಎಲ್‌ಸಿ (ಮೇಲ್ಮಟ್ಟದ) ಕಾಲುವೆಗೆ ತಾಲೂಕಿನ ಚರಕುಂಟೆ ಗ್ರಾಮದ ಬಳಿ 15ನೇ ಉಪ ಕಾಲುವೆಗಳಿವೆ. ಈ ಕಾಲುವೆಯಿಂದ ಜಮೀನುಗಳಿಗೆ ನೀರು ಹರಿಯುವ ಆರಂಭದ ನಾಲ್ಕೈದು ಸಣ್ಣ ಉಪ ಕಾಲುವೆಗಳ ಬಾಗಿಲು ದುಷ್ಕರ್ಮಿಗಳು ಕಿತ್ತೆಸೆದಿದ್ದಾರೆ. ಪರಿಣಾಮ ಈ ಕಾಲುವೆ ಬಂದ್ ಮಾಡಿದರೆ ಮಾತ್ರ ಕೊನೆಯ ಭಾಗದ ರೈತರಿಗೆ ನೀರು ಹೋಗಲಿದೆ. ಸದ್ಯ 15ನೇ ಉಪಕಾಲುವೆ ವ್ಯಾಪ್ತಿಗೆ ಬರುವ ಶಂಕರಬಂಡೆ ಸೇರಿ ಇನ್ನಿತರೆ ಗ್ರಾಮಗಳ ಜಮೀನುಗಳಿಗೆ ನೀರು ಹರಿದಿದ್ದು, ಕೃಷಿ ಚಟುವಟಿಕೆಗಳು ಚುರುಕಾಗಿವೆ. ಆದರೆ, ತಾಲೂಕಿನ ಅಸುಂಡಿ, ಬಿಸಿಲಹಳ್ಳಿ, ಗೋಡೆಹಾಳು ಗ್ರಾಮಗಳ ಮಾರ್ಗದ ಸಣ್ಣ ಉಪ ಕಾಲುವೆಗಳಲ್ಲಿ ಈವರೆಗೂ ಒಂದನಿಯೂ ನೀರು ಹರಿದಿಲ್ಲ. ಮಾತ್ರವಲ್ಲ, ಕಾಲುವೆಗಳು ತೇವಾಂಶವನ್ನೇ ಕಂಡಿಲ್ಲ. ಇದರಿಂದ ಸುಮಾರು 3 ರಿಂದ 4 ಸಾವಿರ ಎಕರೆ ಕೃಷಿ ಜಮೀನಿನ ರೈತರು ಕಾಲುವೆ ನೀರಿಗಾಗಿ ಕಾದು ಕುಳಿತಿದ್ದಾರೆ.
ಜಲಾಶಯಕ್ಕೆ ಈ ಬಾರಿ ನಿಗದಿತ ಅವಧಿಗೂ ಮುನ್ನ ನಿರೀಕ್ಷೆಗೂ ಮೀರಿ ನೀರು ಹರಿದು ಬಂದಿದ್ದರಿಂದ ಜಲಾಶಯದ ಆಡಳಿತ ಮಂಡಳಿ ಕಳೆದ ಜುಲೈ 20ರಿಂದಲೇ ಎಚ್‌ಎಲ್‌ಸಿ ಕಾಲುವೆಗೆ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿತ್ತು. ಈ ಕಾಲುವೆ ನೀರನ್ನೇ ನೆಚ್ಚಿಕೊಂಡಿದ್ದ ಈ ಭಾಗದ ರೈತರು ಸಹ ನಾನಾ ಬೆಳೆಗಳ ಬಿತ್ತನೆ ಮಾಡುವ ಸಲುವಾಗಿ ಹೊಲಗಳನ್ನು ಹದ ಮಾಡಿಕೊಂಡಿದ್ದರು. ಆದರೆ, ಕೊನೆ ಭಾಗದ ರೈತರಿಗೆ ಉಪ ಕಾಲುವೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದು ಬಿತ್ತನೆ ಕಾರ್ಯ ವಿಳಂಬವಾಗಲು ಕಾರಣವಾಗಿದೆ ಎನ್ನುತ್ತಾರೆ ಅಸುಂಡಿ ಗ್ರಾಮದ ರೈತ ಗೋವಿಂದರೆಡ್ಡಿ.
ಕಾಲುವೆ ಮೇಲ್ಭಾಗದ ರೈತರು ಅನಧಿಕೃತ ಪೈಪ್‌ಲೈನ್ ಅಳವಡಿಸಿದ್ದರಿಂದ ಉಪಕಾಲುವೆಗೆ ಈವರೆಗೆ ನೀರು ಬಂದಿಲ್ಲ. ಅಣತಿ ದೂರದ ರೈತರ ಹೊಲಗಳಿಗೆ ನೀರು ಪೂರೈಕೆ ಆಗುತ್ತಿದೆ. ಆದರೆ, ಇಲ್ಲಿ ಮಾತ್ರ ಪೂರೈಕೆ ಆಗುತ್ತಿಲ್ಲ. ಇದನ್ನು ಜಿಲ್ಲಾಡಳಿತ ಅಥವಾ ಜಲಾಶಯ ಮಂಡಳಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಅನಧಿಕೃತ ಪೈಪ್‌ಲೈನ್ ಸಂಪರ್ಕ ಮಾಡಿಕೊಳ್ಳುವ ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಉಭಯ ಗ್ರಾಮಗಳ ರೈತರೆಲ್ಲರೂ ಒಗ್ಗೂಡಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ.
ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ ಕಾಲುವೆಗಳ ಕೊನೆಯ ಭಾಗದ ರೈತರ ನೀರಿನ ಗೋಳು ಯಾರಿಂದಲೂ ತಪ್ಪಿಸಲಾಗುತ್ತಿಲ್ಲ. ಜಲಾಶಯಕ್ಕೆ ಹೆಚ್ಚು ನೀರು ಬಂದರೂ, ಬರದಿದ್ದರೂ ಪ್ರತಿವರ್ಷ ನೀರಿನ ಸಮಸ್ಯೆ ಕಾಡುತ್ತಿದೆ. ಕಾಲುವೆಯಂಚಿನ ನಾನ್ ಆಯಕಟ್ಟು ರೈತರು ಅನಧಿಕೃತವಾಗಿ ನೀರು ಪಡೆದರೂ, ಉಪಕಾಲುವೆಗಳ ಬಾಗಿಲುಗಳು ಕಿತ್ತು ಹೋಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಪ್ರತಿವರ್ಷ ಮರುಕಳಿಸಲು ಕಾರಣವಾಗಿದೆ.
ಸಿದ್ದಾರೆಡ್ಡಿ, ರೈತ, ಅಸುಂಡಿ ಗ್ರಾಮ.
ವೆಂಕೋಬಿ ಸಂಗನಕಲ್ಲು