ತಿ.ನರಸೀಪುರ: ಖಾಸಗಿ ಸಂಸ್ಥೆಯಿಂದ ವಿಕ್ರಮ್ ಎಂಬ ಭತ್ತದ ಬಿತ್ತನೆ ಬೀಜ ಖರೀದಿಸಿ ನಾಟಿ ಮಾಡಿದ ರೈತರು, ಸಂಪೂರ್ಣ ಬೆಳೆ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದು, ಕಂಗಾಲಾಗಿದ್ದಾರೆ. ತಾಲೂಕಿನ ಮೂಗೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ವಿಕ್ರಮ್ ಎಂಬ ಹೆಸರಿನ ಬಿತ್ತನೆ ಬೀಜವನ್ನು ಖರೀದಿಸಿ ನಾಟಿ ಮಾಡಿದ್ದರು. ಆದರೆ, ಇದೀಗ ಸಂಪೂರ್ಣ ಬೆಳೆ ಬಾರದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮೂಗೂರು ಗ್ರಾಮದ ಸುತ್ತ ಮುತ್ತ ಸುಮಾರು 80 ಎಕರೆ ಪ್ರದೇಶದಲ್ಲಿ ಈ ತಳಿಯನ್ನು ಬೆಳೆಯಲಾಗಿದೆ.
ಬಾಡುತ್ತಿರುವ ಬೆಳೆ: ಶ್ರೀರಾಮ ಅಗ್ರಿ ಜೆನಿಟಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರ ವಿಕ್ರಮ್ ಎಂಬ ಭತ್ತದ ತಳಿ ಬಿತ್ತನೆ ಬೀಜವನ್ನು ಖಾಸಗಿ ಏಜೆನಿ ಮೂಲಕ ಖರೀದಿಸಿ ನಾಟಿ ಮಾಡಿದ ರೈತರು ಇತ್ತ ಬೆಳೆಯೂ ಇಲ್ಲದೆ ತೊಡಗಿಸಿದ ಹಣವು ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತದ ಪೈರು ಬೆಳೆಯನ್ನು ಮೈತುಂಬಿಕೊಳ್ಳದೇ ಕಾಳು ಕಟ್ಟುವ ಮುನ್ನವೆ ಹಸಿರು ಮೇವಿನಂತೆ ಬೆಳೆದು ಬಾಡುತ್ತಿದೆ.
ಬಿತ್ತನೆ ಬೀಜ ಮಾರಾಟಗಾರರಿಂದ ಖರೀದಿಸಿ ರೈತರು ಹೊಸ ತಳಿ ಅಧಿಕ ಇಳುವರಿ ಬರುವ ನಿರೀಕ್ಷೆಯಲ್ಲಿ ಸಾಲಸೋಲಮಾಡಿ ಬಿತ್ತನೆ ಮಾಡಿದ್ದರು. ಹಲವು ಬಾರಿ ಭತ್ತದ ಗದ್ದೆಗೆ ಎರಡು ಮೂರು ಬಾರಿ ಕ್ರಿಮಿನಾಶಕ ಔಷಧಿ ಸಿಂಪಡಿಸಿದರೂ ಬೆಳೆಯಲ್ಲಿ ಚೇತರಿಕೆ ಇಲ್ಲವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಪರಿಹಾರಕ್ಕೆ ಆಗ್ರಹ: ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಹಾಗೂ ಕಂಪನಿಯ ಮಾಲಿಕರು ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಬೇಕು ಎಂದು ತಾಲೂಕು ಪಂಚಾಯ್ತಿ ಸದಸ್ಯ ಮೂಗೂರು ಎಂ.ಚಂದ್ರಶೇಖರ್ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕುಮಾರಸ್ವಾಮಿ ಮತ್ತಿತರರು ಆಗ್ರಹಿಸಿದ್ದಾರೆ.
ಪರಿಶೀಲನೆ: ರೈತರ ಮನವಿ ಮೇರೆಗೆ ತಿ.ನರಸೀಪುರ ತಾಲೂಕಿನಲ್ಲಿ ವಿಕ್ರಮ್ ತಳಿ ಭತ್ತ ಬಿತ್ತನೆ ಮಾಡಿ ಬೆಳೆ ಹಾನಿಯಾಗಿರುವ ಜಮೀನುಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸಮಗ್ರ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿಜ್ಞಾನಿಗಳು ಬೆಳವಣಿಗೆಯನ್ನು ಅವಲೋಕಿಸಿ ಪರೀಕ್ಷಿಸಿದ ನಂತರ ಬಿತ್ತನೆ ಬೀಜದ ಗುಣಮಟ್ಟದ ಬಗ್ಗೆ ಮಾಹಿತಿ ನೀಡಲಾಗುವುದು. ಬಿತ್ತನೆ ಬೀಜದ ಅಧಿಕೃತ ಮಾರಾಟಗಾರ ಮಾಲೀಕರು ಎಷ್ಟು ಭತ್ತವನ್ನು ರೈತರಿಗೆ ನೀಡಿದ್ದಾರೆ. ಯಾರು ಯಾರು ಭತ್ತವನ್ನು ಖರೀದಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದು ಗುಣಮಟ್ಟದ ಬಗ್ಗೆ ಮಾಹಿತಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
-ಸುಂದರಮ್ಮ, ಕೃಷಿ ಅಧಿಕಾರಿ