Advertisement
ಸಾಮಾನ್ಯವಾಗಿ ಮಳೆ ಬರುತ್ತಿದ್ದಂತೆ ಕೃಷಿಕರು ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪಡಣೆಗೆ ವ್ಯವಸ್ಥೆ ಮಾಡುತ್ತಾರೆ. ಒಂದೆರಡು ದಿನ ಮಳೆ ಬಿಡುವು ಪಡೆದುಕೊಂಡ ದಿನವನ್ನೇ ಆಯ್ದುಕೊಂಡು, ಮದ್ದು ಸಿಂಪಡಣೆ ಕೆಲಸ ನಡೆಸಲಾಗುತ್ತದೆ. ಆದರೆ ಇದುವರೆಗೆ ಮಳೆ ಬಿಡುವು ಪಡೆದುಕೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಮಳೆ ಬಿಡುವು ಪಡೆದುಕೊಳ್ಳುವ ದಿನದಲ್ಲೇ ಕೂಲಿ ಕಾರ್ಮಿಕರನ್ನು ಹುಡುಕುವ ಕೆಲಸ ಇನ್ನೊಂದು ಕಡೆಯ ಸವಾಲು.
ಜುಲೈ ತಿಂಗಳ 17ನೇ ತಾರೀಕಿನ ಬಳಿಕ ತುಳುವಿನ ಆಟಿ ಪ್ರಾರಂಭ ಆಗುತ್ತದೆ. ಹಿಂದಿನ ಕಾಲದ ನಂಬಿಕೆ ಪ್ರಕಾರ, ಆಟಿ ತಿಂಗಳಿನಲ್ಲಿ ಮನೆಯಿಂದ ಹೊರಹೋಗಲು ಸಾಧ್ಯ ಇಲ್ಲದಷ್ಟು ಮಳೆ ಆಗುತ್ತದೆ. ಆದ್ದರಿಂದ ಇದಕ್ಕೆ ಮೊದಲು ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪರಣೆ ಕೆಲಸ ಆಗಬೇಕು. ಇಲ್ಲದೇ ಹೋದರೆ, ಸಮಸ್ಯೆ ಖಾತ್ರಿ.
Related Articles
ಒಂದೊಂದು ಅಡಿಕೆ ಬೀಳತೊಡಗಿದೆ ಎಂದ ಮಾತ್ರಕ್ಕೆ, ಕೊಳೆರೋಗ ಎಂಟ್ರಿ ಪಡೆದಿದೆಯೇ ಎಂಬ ಭಯ ಬೇಡ. ಯಾಕೆಂದರೆ, ಕಳೆದ ವರ್ಷಗಳಲ್ಲಿ ಕಾಡಿದ್ದ ಕೊಳೆರೋಗದ ಯಾವ ಲಕ್ಷಣಗಳು ಕರಾವಳಿಯಲ್ಲಿ ಗೋಚರ ಆಗಿಲ್ಲ. 24 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನ ದಾಖಲಾದರೆ, ಕೊಳೆರೋಗ ಬರುವ ಸಾಧ್ಯತೆ ಅಧಿಕ. ಆದರೆ ಸದ್ಯ 27ರಿಂದ 28 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗುತ್ತಿದೆ. ಆದ್ದರಿಂದ ಕೊಳೆರೋಗದ ಬಗ್ಗೆ ಭಯ ಪಡುವ ಅಗತ್ಯವೇ ಇಲ್ಲ. ಹಾಗೆಂದು, ಮದ್ದು ಸಿಂಪರಣೆ ಬಗ್ಗೆ ಉದಾಸೀನ ಮಾಡುವಂತಿಲ್ಲ. ಮಳೆ ಬಿಡುವು ಪಡೆದ ತಕ್ಷಣ ಮದ್ದು ಸಿದ್ಧ ಪಡಿಸುವ ಕೆಲಸ ನಡೆಯಬೇಕಿದೆ.
Advertisement
ಕೊಳೆ ರೋಗದ ಭೀತಿ ಇಲ್ಲಮಳೆ ಬಿರುಸು ಪಡೆದುಕೊಂಡಿದೆ. ಅಡಿಕೆ ಒಂದೊಂದಾಗಿ ನೆಲಕ್ಕೆ ಬೀಳುತ್ತದೆ. ಹಾಗೆಂದು ಕೊಳೆರೋಗದ ಭೀತಿ ಇಲ್ಲ. ಆದರೆ ಆಟಿ ತಿಂಗಳು ಪ್ರಾರಂಭ ಆಗುವ ಮೊದಲು ಮದ್ದು ಸಿಂಪಡಣೆಯ ಕೆಲಸ ಆಗಬೇಕಿದೆ. ಅಲ್ಲಿಯವರೆಗೆ ಮಳೆ ಬಿಡುವುದನ್ನೇ ಕಾಯುತ್ತಿದ್ದೇವೆ.
– ಸುಬ್ರಹ್ಮಣ್ಯ, ಕಾಣಿಯೂರು, ಕೃಷಿಕ — ಗಣೇಶ್ ಎನ್. ಕಲ್ಲರ್ಪೆ