Advertisement

ಪಾಕ್‌ ಪರ ಘೋಷಣೆ; ನ್ಯಾಯಾಂಗ ಬಂಧನ ವಿಸ್ತರಣೆ

11:25 PM Mar 02, 2020 | Lakshmi GovindaRaj |

ಹುಬ್ಬಳ್ಳಿ: ಪಾಕಿಸ್ತಾನ ಪರ ಹೇಳಿಕೆ ನೀಡಿ ಬಂಧಿತರಾದ ಕಾಶ್ಮೀರ ಮೂಲದ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸ್ಥಳೀಯ 2ನೇ ಜೆಎಂಎಫ್‌ ನ್ಯಾಯಾಲಯ ಮಾ.13ರವರೆಗೆ ವಿಸ್ತರಿಸಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಜಮ್ಮು-ಕಾಶ್ಮೀರ ಮೂಲದ ಬಸೀತ ಆಶೀಕ್‌ ಆಸೀಕ್‌ ಹುಸೇನ್‌ ಸೋಫಿ, ತಾಲೀಬಮಜೀದ್‌ ಅಬ್ದುಲಮಜೀದ್‌ ವಾನಿ, ಅಮೀರಮೊಹೀದ್ದಿನ್‌ ಗುಲಾಮಮೊಹೀದ್ದಿನ್‌ ವಾನಿ ದೇಶದ್ರೋಹ ಪ್ರಕರಣದಡಿ ಬಂಧಿತರಾಗಿದ್ದರು.

Advertisement

ಗ್ರಾಮೀಣ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮೂವರನ್ನು ಮೂರು ದಿನ ವಶಕ್ಕೆ ಪಡೆದಿದ್ದು, ಬಂಧಿತರು ಮಾ.7ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಪ್ರಕರಣದ ತನಿಖೆಗಾಗಿ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. 2ನೇ ಜೆಎಂಎಫ್‌ಸಿ ನ್ಯಾಯಾಧೀಶ ವಿಶ್ವನಾಥ ಮೂಗತಿ ಅವರು ವಿಡಿಯೋ ಕಾನ್‌ರೆನ್ಸ್‌ ಮೂಲಕ ಬಂಧಿತರನ್ನು ವಿಚಾರಣೆಗೊಳಪಡಿಸಿ, ನಂತರ ನ್ಯಾಯಾಂಗ ಬಂಧನದ ಅವಧಿಯನ್ನು ಮಾ.13ರವರೆಗೆ ವಿಸ್ತರಿಸಿದರು ಎಂದು ತಿಳಿದುಬಂದಿದೆ.

ತಕರಾರು ಅರ್ಜಿ ಸಲ್ಲಿಕೆಗೆ ಅವಕಾಶ: ಜಾಮೀನು ಅರ್ಜಿ ಕುರಿತು ತಕರಾರು ಅರ್ಜಿ ಸಲ್ಲಿಸಲು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ.5ರವರೆಗೆ ಕಾಲಾವಕಾಶ ನೀಡಿದೆ. ಬಂಧಿತರಿಗೆ ಜಾಮೀನು ಮಂಜೂರು ಮಾಡುವಂತೆ ಕೋರಿ ಬಂಧಿತರ ಪರ ವಕೀಲರು ಶುಕ್ರವಾರ ಧಾರವಾಡ ಜಿಲ್ಲಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸ್ಥಳೀಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ನೋಟಿಸ್‌ ಪಡೆಯುವಂತೆ ನಿರ್ದೇಶಿಸಿದ್ದರು. ಸೋಮವಾರ ನಡೆದ ಈ ಅರ್ಜಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅವರು ಕಾಲಾವಕಾಶ ಕೋರಿದ್ದು, ಮಾ.5 ರೊಳಗೆ ತಕರಾರು ಅರ್ಜಿ ಸಲ್ಲಿಸಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next