Advertisement

ಪಾಕ್‌ ಪರ ಘೋಷಣೆ: ನಕ್ಸಲ್‌ ನಂಟಿನ ತನಿಖೆ

11:49 PM Feb 21, 2020 | Lakshmi GovindaRaj |

ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಕೊಪ್ಪ ಮೂಲದ ಅಮೂಲ್ಯಾಳಿಗೆ ನಕ್ಸಲರ ನಂಟಿರುವ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಗೃಹ ಸಚಿವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಅಮೂಲ್ಯಾ ಚಿಕ್ಕಮಗಳೂರಿನ ಕೊಪ್ಪ ಮೂಲದವರಾಗಿದ್ದು, ಈ ಹಿಂದೆ ಆ ಭಾಗದಲ್ಲಿ ನಕ್ಸಲ್‌ ಚಟುವಟಿಕೆ ನಡೆಯು ತ್ತಿದ್ದರಿಂದ ತನಿಖೆ ನಡೆಸಲು ಸಚಿವರು ಸೂಚಿಸಿದ್ದಾರೆ ಎನ್ನಲಾಗಿದ್ದು, ಚಿಕ್ಕಮಗಳೂರು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸಿಎಎ ವಿರೋಧಿ ಪ್ರತಿಭಟನೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ನೀಡಲು ಹೆಚ್ಚಿನ ಷರತ್ತು ವಿಧಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಪಾಕ್‌ ಪರ ಯುವತಿ ಘೋಷಣೆ ಕೂಗಿರುವ ಪ್ರಕರಣದ ಕುರಿತು ಶುಕ್ರವಾರ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಚಿವರು ನಕ್ಸಲ್‌ ನಂಟಿನ ಕುರಿತಂತೆಯೂ ತನಿಖೆ ನಡೆಸಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.  ಆಯುಕ್ತರ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಯುವತಿ ಹಿನ್ನೆಲೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರೇ ಅವಳನ್ನು ಕರೆಸಿದ್ದರ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕಾರ್ಯಕ್ರಮ ಆಯೋಜಕರಿಗೂ ನೋಟಿಸ್‌ ನೀಡಲಾಗುತ್ತಿದ್ದು, ಇದರ ಹಿಂದೆ ಸಂಘಟನೆಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ ಎಂದರು.

ಅಮೂಲ್ಯಾಳನ್ನು ಗಡಿ ಪಾರು ಮಾಡುವ ಬಗ್ಗೆ ಆಲೋಚನೆ ಮಾಡಿಲ್ಲ. ನಮ್ಮಲ್ಲೇ ಸಾಕಷ್ಟು ಬಿಗಿ ಕಾನೂನುಗಳಿವೆ. ಯುವತಿ ತನ್ನ ಹಿಂದೆ ಸಾಕಷ್ಟು ಸಂಘಟನೆಗಳಿವೆ ಎಂದು ಹೇಳಿರುವುದು ಗಮನಕ್ಕೆ ಬಂದಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದರು. ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲಾಗು ತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು.

ಈ ರೀತಿಯ ಘಟನೆಗಳು ನಡೆದಾಗ ಪ್ರತಿಭಟನೆಗೆ ಅವಕಾಶ ನೀಡಲು ಯೋಚನೆ ಮಾಡಬೇಕಾಗುತ್ತದೆ. ದೇಶದ್ರೋಹಿ ಸಂಘಟನೆಗಳಿಗೆ ಈಗ ಕಾರ್ಯಕರ್ತರು ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ದೆಹಲಿ, ಹುಬ್ಬಳ್ಳಿ, ಈಗ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳೇ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ವಿದ್ಯಾರ್ಥಿ ಗಳಿಗೆ ಜಾಮೀನು ಪಡೆಯಲು ಬಾಂಡ್‌ ಕೊಟ್ಟವರು ಯಾರು ಎಂಬುದೂ ಬಹಿರಂಗವಾಗಲಿದೆ ಎಂದರು.

Advertisement

ಸಂಸದ ಅಸಾವುದ್ದೀನ್‌ ಒವೈಸಿ ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕಾ, ಬೇಡವೇ ಎಂಬ ಬಗ್ಗೆ ಮರು ಪರಿಶೀಲನೆ ಮಾಡ ಬೇಕಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ರಾಯಚೂರಿನಲ್ಲಿ ಒವೈಸಿ ಪಾಲ್ಗೊಳ್ಳುವ ಕಾರ್ಯಕ್ರಮ ನಿಷೇಧಿಸಲಾಗಿತ್ತು. ಆಗ ಸಂಘಟ ಕರನ್ನೇ ಬಂಧಿಸಲಾಗಿತ್ತು. ಆದರೆ, ನಾವು ಕಾರ್ಯ ಕ್ರಮಕ್ಕೆ ಅವಕಾಶ ನೀಡಿದ್ದೆವು. ಈ ರೀತಿಯ ಘಟನೆಗಳು ನಡೆಯುವುದರಿಂದ ಒವೈಸಿ ಕಾರ್ಯ ಕ್ರಮ ಗಳಿಗೆ ಅನುಮತಿ ನೀಡುವ ಕುರಿತು ಮರು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಇನ್ನು ಮುಂದೆ ಈ ರೀತಿಯ ಪ್ರತಿಭಟನೆಗಳ ಆಯೋಜನೆಗೆ ಅನುಮತಿ ನೀಡುವಾಗ ಷರತ್ತುಗಳನ್ನು ಹೆಚ್ಚಿಸಲಾಗುತ್ತದೆ. ವೇದಿಕೆ ಮೇಲಿರುವವರ ಸಂಪೂರ್ಣ ಮಾಹಿತಿ ಪಡೆಯಲಾಗುತ್ತದೆ. ಗದ್ದಲ ನಡೆದ ಬಳಿಕ ಮೈಕ್‌ ಕಿತ್ತುಕೊಳ್ಳುವ ನಾಟಕ ಬೇಕಾಗಿಲ್ಲ.
-ಭಾಸ್ಕರ್‌ ರಾವ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.