ಧಾರವಾಡ: ವರಕವಿ ಡಾ| ದ.ರಾ. ಬೇಂದ್ರೆ ಅವರ 124ನೇ ಜನ್ಮದಿನದ ಪ್ರಯುಕ್ತ ನೀಡುವ 2019ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನಾಡೋಜ ಪ್ರೊ| ಕೆ.ಎಸ್. ನಿಸಾರಅಹ್ಮದ ಹಾಗೂ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ನಗರದ ಬೇಂದ್ರೆ ಭವನದಲ್ಲಿ ಗುರುವಾರ ಸಂಜೆ ಪ್ರದಾನ ಮಾಡಲಾಯಿತು.
ಡಾ| ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಈ ಸಲ ಇಬ್ಬರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದರಿಂದ ಒಂದು ಲಕ್ಷ ನಗದು ಪ್ರಶಸ್ತಿ ಮೊತ್ತದಲ್ಲಿ ಇಬ್ಬರೂ ಸಾಧಕರಿಗೆ ತಲಾ 50 ಸಾವಿರ ರೂ. ಹಂಚಿ, ಪ್ರಶಸ್ತಿ ಪ್ರದಾನ ಮಾಡಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿತ್ಯೋತ್ಸವ ಕವಿ ಪ್ರೊ| ಕೆ.ಎಸ್. ನಿಸಾರ ಅಹ್ಮದ, ತಮ್ಮ ಶಬ್ಧ ಗಾರುಡಿಯಿಂದ ಇಡೀ ನಾಡನ್ನೇ ಮೋಡಿ ಮಾಡಿದ ಅದ್ವಿತೀಯ ವರಕವಿ ಕವಿ ಡಾ| ದ.ರಾ. ಬೇಂದ್ರೆ ಅವರಿಗೆ ರಾಜ್ಯ ಸರ್ಕಾರ ಅಪಚಾರ ಎಸಗಿದೆ. ಬೇಂದ್ರೆ ಹೆಸರಿನಲ್ಲಿರುವ ರಾಷ್ಟ್ರೀಯ ಟ್ರಸ್ಟ್‌ಗೆ ತೀರಾ ಕಡಿಮೆ ಅನುದಾನ ನೀಡುತ್ತಿರುವುದು ಖೇದಕರ ಸಂಗತಿ. ಬೇರೆ ಬೇರೆ ಕವಿ ಹಾಗೂ ಸಂಗೀತಗಾರರ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟಿಗಟ್ಟಲೇ ಹಣ ವೆಚ್ಚ ಮಾಡುತ್ತಿದೆ. ಆದರೆ, ಬೇಂದ್ರೆ ಅವರ ಟ್ರಸ್ಟ್‌ಗೆ ಬರೀ 10 ಲಕ್ಷ ನೀಡುತ್ತಿದೆ. 6 ಲಕ್ಷ ಸಂಬಳ ಹಾಗೂ ಉಳಿದ ನಾಲ್ಕು ಲಕ್ಷದಲ್ಲಿ 1 ಲಕ್ಷ ಮೊತ್ತದ ಪ್ರಶಸ್ತಿ ಹಾಗೂ ಇತರೆ ಚಟುವಟಿಕೆಗಳನ್ನು ಹೇಗೆ ನಡೆಸಬೇಕು? ಕೂಡಲೇ ಟ್ರಸ್ಟ್ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು. ಈ ಸಂಗತಿಯನ್ನು ಬೇಂದ್ರೆ ಅಭಿಮಾನಿಗಳು ಸಹ ಖಂಡಿಸಬೇಕು ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಡಾ| ದೊಡ್ಡರಂಗೇಗೌಡ ಮಾತನಾಡಿ, ಬೇಂದ್ರೆಯವರ ಬಗ್ಗೆ ಮಾತನಾಡುವುದು ಎಂದರೆ ಜಗತ್ತು, ಹಿಮಾಲಯ, ಮಹಾನದಿ ಗಂಗಾ, ಅಂಬರದ ಬಗ್ಗೆ ಮಾತನಾಡಿದಂತೆ. ಅವರ ಮನೆ ಕಾವ್ಯದ ಪವಿತ್ರ ಕ್ಷೇತ್ರವಾಗಿದೆ. ಅವರು ರೂಢಿಸಿಕೊಂಡಿದ್ದ ದೇಶಿ ಶೈಲಿಯು ಹೇಗೆ ಎಂಬ ಅನುಮಾನಗಳು ಮೂಡಿದ್ದವು. ಅಪ್ಪಟ ನೆಲದ ಸೊಗಡಿನಲ್ಲಿ ಕವಿತೆಗಳನ್ನು ರಚಿಸುವ ಮೂಲಕ ವಿಶೇಷತೆ ಹೊಂದಿದ್ದ ಕವಿಯಾಗಿದ್ದರು. ದುಗುಡ ದುಮ್ಮಾನಗಳು ಹೋಗುವಂತಹ ಹಾಡುಗಳನ್ನು ರಚಿಸಿದ್ದಾರೆ ಎಂದು ಬಣ್ಣಿಸಿದರು.
ಟ್ರಸ್ಟ್ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ, ಡಾ| ರಾಜಶೇಖರ ಮಠಪತಿ, ಡಾ| ಇಕ್ಬಾಲ್ ಅಹಮ್ಮದ, ಕೆ.ಎಚ್. ಚೆನ್ನೂರ, ಪ್ರಕಾಶ ಬಾಳಿಕಾಯಿ ಇನ್ನಿತರರಿದ್ದರು.