ಅಂಟ್ವೆರ್ಪ್ (ಬೆಲ್ಜಿಯಂ): ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಪುರುಷರ ಹಾಗೂ ವನಿತಾ ಹಾಕಿ ತಂಡಗಳೆರಡೂ ಆತಿಥೇಯ ಬೆಲ್ಜಿಯಂ ವಿರುದ್ಧ ಸೋಲನುಭವಿಸಿವೆ.
ಪುರುಷರ ತಂಡಕ್ಕೆ 1-4 ಅಂತರದ ಆಘಾತ ಎದುರಾದರೆ, ವನಿತಾ ತಂಡ 0-2 ಗೋಲುಗಳ ಸೋಲನುಭವಿಸಿತು. ಸವಿತಾ ಪುನಿಯಾ ನಾಯಕತ್ವದ ವನಿತಾ ತಂಡ ಮೊದಲಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿತು. ಎರಡೂ ತಂಡಗಳು ಗೋಲು ಬಾರಿಸಲು ವಿಫಲವಾದವು. ಆದರೆ 3ನೇ ಕ್ವಾರ್ಟರ್‌ನಲ್ಲಿ ಬೆನ್ನು ಬೆನ್ನಿಗೆ 2 ಗೋಲು ಬಾರಿಸಿದ ಬೆಲ್ಜಿಯಂ ಈ ಮುನ್ನಡೆಯನ್ನು ಕೊನೆಯ ತನಕವೂ ಕಾಯ್ದುಕೊಂಡಿತು.
ಪುರುಷರ ತಂಡದ ಆಟ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ಮುಂದೆ ನಡೆಯಲಿಲ್ಲ. ದ್ವಿತೀಯ ಕ್ವಾರ್ಟರ್‌ನಿಂದ ಭಾರತದ ಮೇಲೆ ಆಕ್ರಮಣ ಗೈಯತೊಡಗಿದ ಬೆಲ್ಜಿಯಂ, 49ನೇ ನಿಮಿಷದಲ್ಲಿ 4ನೇ ಗೋಲು ಸಿಡಿಸಿ ಪರಾಕ್ರಮ ಮೆರೆಯಿತು. ಭಾರತದ ಏಕೈಕ ಗೋಲು 55ನೇ ನಿಮಿಷದಲ್ಲಿ ದಾಖಲಾಯಿತು.
ಜೂನಿಯರ್ ಹಾಕಿ: ಭಾರತ ಪರಾಭವ
ಬ್ರೇಡಾ (ನೆದರ್ಲೆಂಡ್ಸ್): ಭಾರತದ ಜೂನಿ ಯರ್ ಹಾಕಿ ತಂಡ ಸ್ಥಳೀಯ ಬ್ರೇಡಾಸ್ ಹಾಕಿ ಕ್ಲಬ್ ವಿರುದ್ಧ ದಿಟ್ಟ ಹೋರಾಟ ನೀಡಿಯೂ 4-5 ಗೋಲುಗಳಿಂದ ಪರಾಭವಗೊಂಡಿದೆ.
ನಾಯಕ ರೋಹಿತ್, ಆನಂದ್ ಖುಷ್ವಾಹ, ಅಂಕಿತ್ ಪಾಲ್ ಮತ್ತು ಅರ್ಷದೀಪ್ ಸಿಂಗ್ ಭಾರತದ ಗೋಲುವೀರರಾಗಿದ್ದರು. ಆಕ್ರಮಣಕಾರಿಯಾಗಿ ಆಟ ಆರಂಭಿಸಿದ ಬ್ರೇಡಾಸ್ ಕ್ಲಬ್ ಮೊದಲ ಕ್ವಾರ್ಟರ್‌ನಲ್ಲೇ 2 ಗೋಲು ಬಾರಿಸಿ ಮುನ್ನಡೆ ಸಾಧಿಸಿತ್ತು. ಇನ್ನೇನು ಪಂದ್ಯ ಡ್ರಾಗೊಳ್ಳಲಿದೆ ಎನ್ನುವಾಗಲೇ ಸ್ಥಳೀಯ ತಂಡ ಗೆಲುವಿನ ಗೋಲ್ ಬಾರಿಸಿತು.