Advertisement

ಅಗ್ರಸ್ಥಾನಕ್ಕೆ ನೆಗೆದ ಬೆಂಗಾಲ್‌ ವಾರಿಯರ್ಸ್‌

11:38 PM Sep 25, 2019 | Team Udayavani |

ಜೈಪುರ: ಜೈಪುರ ಚರಣದ ಬುಧವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ ಒಂದಂಕದ ರೋಚಕ ಗೆಲುವು ಸಾಧಿಸಿದೆ. ಈ ಜಿದ್ದಾಜಿದ್ದಿ ಮುಖಾಮುಖೀಯಲ್ಲಿ ಬೆಂಗಾಲ್‌ 40-39 ಅಂಕಗಳಿಂದ ಗೆದ್ದು ಬಂದಿತು.

Advertisement

ಈ ಜಯದ ಬಳಿಕ ಬೆಂಗಾಲ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ (73). ಸುದೀರ್ಘ‌ ಸಮಯದ ತನಕ ಅಗ್ರ ಸ್ಥಾನದಲ್ಲಿದ್ದ ದಬಾಂಗ್‌ ಡೆಲ್ಲಿ ದ್ವಿತೀಯ ಸ್ಥಾನಕ್ಕೆ ಇಳಿದಿದೆ (72). ಈ ಎರಡೂ ತಂಡಗಳು ಈಗಾಗಲೇ ಪ್ಲೇ-ಆಫ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಮತ್ತೂಂದು ಕಡೆ ಸೋತ ತೆಲುಗು ಟೈಟಾನ್ಸ್‌ ಕೂಟದಿಂದ ಹೊರಬಿದ್ದಿದೆ. ಸದ್ಯ ಅದು ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ (34). ಇದು ಪ್ರೊ ಕಬಡ್ಡಿ ಆವೃತ್ತಿಗಳಲ್ಲೇ ಟೈಟಾನ್ಸ್‌ ತಂಡದ ಅತ್ಯಂತ ಕಳಪೆ ನಿರ್ವಹಣೆಯಾಗಿದೆ.

ಬೆಂಗಾಲ್‌ ಪರ ಮಣಿಂದರ್‌ ಸಿಂಗ್‌ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. 22 ಬಾರಿ ಎದುರಾಳಿ ಕೋಟೆಗೆ ನುಗ್ಗಿದ ಅವರು 17 ಅಂಕ ಗಳಿಸಿದರು. ಇವರಿಗೆ ಸರಿಸಮನಾಗಿ ದಾಳಿ ಮಾಡಿದ ತೆಲುಗು ತಂಡದ ಸಿದ್ಧಾರ್ಥ್ ದೇಸಾಯಿ, 16 ಯತ್ನದಲ್ಲಿ 15 ಅಂಕ ಸಂಪಾದಿಸಿದರು. ಇವರು ಎದುರಾಳಿ ಕೋಟೆಗೆ ಪ್ರವೇಶ ಮಾಡಿದ ಸಂದರ್ಭದಲ್ಲೆಲ್ಲ ಯಶಸ್ಸನ್ನೇ ಕಂಡರು. ಹೀಗಾಗಿ ಎರಡೂ ತಂಡಗಳ ನಡುವೆ ನಿಕಟ ಕಾದಾಟ ಸಾಧ್ಯವಾಯಿತು.

8 ಪಂದ್ಯಗಳ ಬಳಿಕ ಜಯ!
ದಿನದ ದ್ವಿತೀಯ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 43-34 ಅಂತರದಿಂದ ಪುನೇರಿ ಪಲ್ಟಾನ್‌ಗೆ ಸೋಲುಣಿಸಿತು. ಇದು 8 ಪಂದ್ಯಗಳ ಬಳಿಕ ಜೈಪುರ ಸಾಧಿಸಿದ ಮೊದಲ ಗೆಲುವು. ಈ ಅವಧಿಯ 6 ಪಂದ್ಯಗಳಲ್ಲಿ ಸೋಲನುಭವಿಸಿದರೆ, 2 ಪಂದ್ಯ ಟೈ ಆಗಿತ್ತು. ಇದು ಜೈಪುರಕ್ಕೆ ತವರಿನ ಅಂಗಳದಲ್ಲಿ ಒಲಿದ ಮೊದಲ ಜಯವೆಂಬುದು ವಿಶೇಷ.

ನಾಯಕ ದೀಪಕ್‌ ಹೂಡಾ (12), ದೀಪಕ್‌ ನರ್ವಾಲ್‌ (11) ಜೈಪುರ ಪರ ಉತ್ತಮ ಪ್ರದರ್ಶನವಿತ್ತರು.

Advertisement
Advertisement

Udayavani is now on Telegram. Click here to join our channel and stay updated with the latest news.

Next