Advertisement

ಪ್ರೊ ಕಬಡ್ಡಿ V/s ಹೇ ಕಬಡ್ಡಿ  ಡಿ.1ರಂದು ಚಾಲನೆ

03:45 AM Jul 17, 2017 | Team Udayavani |

ಬೆಂಗಳೂರು: ಸ್ಟಾರ್‌ನ್ಪೋರ್ಟ್ಸ್ ವಾಹಿನಿ ಮತ್ತು ಎಕೆಎಫ್ಐ (ಭಾರತ ಕಬಡ್ಡಿ ಒಕ್ಕೂಟ) ಜಂಟಿಯಾಗಿ 4 ಆವೃತ್ತಿ ಪ್ರೊ
ಕಬಡ್ಡಿಯನ್ನು ಆಯೋಜಿಸಿವೆ. ಇದೀಗ 5ನೇ ಆವೃತ್ತಿಗೆ ಸಜ್ಜಾಗಿವೆ. ಇಂತಹ ಹೊತ್ತಿನಲ್ಲಿ ಪ್ರೊ ಕಬಡ್ಡಿಗೆ ಬಂಡಾಯವಾಗಿ
ಹೇ ಕಬಡ್ಡಿ ಇಂಡಿಯನ್‌ ಲೀಗ್‌ ಆಯೋಜಿಸಲು ಎನ್‌ಕೆಎಫ್ಐ (ನ್ಯೂ ಕಬಡ್ಡಿ ಫೆಡರೇಷನ್‌ ಆಫ್ ಇಂಡಿಯಾ)
ಸಿದ್ಧವಾಗಿದೆ. ಡಿ.1ರಿಂದ ದೊಡ್ಡ ಪ್ರಮಾಣದಲ್ಲಿ ಕೂಟ ಆರಂಭವಾಗಲಿದೆ.

Advertisement

ಮತ್ತೂಂದು ಕಡೆ ಭಾರತದಲ್ಲಿ ಕಬಡ್ಡಿ ಉಸ್ತುವಾರಿ ವಹಿಸಿಕೊಳ್ಳಬೇಕಾದ ನೈಜ ಕಬಡ್ಡಿ ಸಂಸ್ಥೆ ಯಾವುದು ಎಂಬ
ವಿಚಾರಣೆ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದೆ. ಒಂದು ವೇಳೆ ಎಕೆಎಫ್ಐ ವಿರುದ್ಧವಾಗಿ ತೀರ್ಪು ಬಂದರೆ
ಭಾರತ ಕ್ರೀಡಾವಲಯದಲ್ಲಿ ಸ್ಫೋಟಕ ಬೆಳವಣಿಗೆಗಳು ನಡೆಯಲಿವೆ. ಸ್ಟಾರ್‌ನ್ಪೋರ್ಟ್ಸ್ ನಡೆಸುತ್ತಿರುವ ಪ್ರೊ ಕಬಡ್ಡಿ
ಕೂಡ ಅತಂತ್ರಕ್ಕೆ ಸಿಲುಕಲಿದೆ.

ಡಿ.1ರಿಂದ ಕೂಟ ಆರಂಭ: ಜೈಪುರ ಮೂಲದ ಕಾರ್ಯಕ್ರಮ ನಿರ್ವಹಣಾ ಸಂಸ್ಥೆ “ಗಾಂಧಿ ನ್ಪೋರ್ಟ್ಸ್’ ಕೂಟಕ್ಕೆ ಸಿದ್ಧತೆ
ನಡೆಸುವ ಜವಾಬ್ದಾರಿ ಹೊತ್ತಿದೆ. ಈ ವಿಷಯವನ್ನು ಸ್ವತಃ “ಹೇ ಕಬಡ್ಡಿ ಇಂಡಿಯನ್‌ ಕಬಡ್ಡಿ ಲೀಗ್‌’ ತಾಂತ್ರಿಕ ಅಧಿಕಾರಿ ಜಯ ಕುಮಾರ್‌ “ಉದಯವಾಣಿ’ಗೆ ಖಚಿತಪಡಿಸಿದ್ದಾರೆ. ಡಿ.1ರಿಂದ ಕೂಟ ಆರಂಭಿಸಲು ನಿರ್ಧರಿಸಲಾಗಿದೆ.

ಬೆಂಗಳೂರು ಮತ್ತು ನವದೆಹಲಿಯಲ್ಲಿ ಕ್ರಮವಾಗಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಒಟ್ಟಾರೆ ಒಂದು ತಿಂಗಳು, ಎರಡು ತಾಣಗಳಲ್ಲಿ ಕೂಟ ನಡೆಯಲಿದೆ. ಎಂಟು ಫ್ರಾಂಚೈಸಿಗಳ 160 ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಯಾವ್ಯಾವ ಪ್ರಾಂಚೈಸಿಗಳು?: ಒಟ್ಟು 8 ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ನಾರ್ಥ್ಈಸ್ಟ್‌ ಯುನೈಟೆಡ್‌, ಪಂಜಾಬ್‌, ಹರ್ಯಾಣ ಹಾಗೂ ಮಹಾರಾಷ್ಟ್ರ ತಂಡಗಳು ಕೂಟದಲ್ಲಿ ಭಾಗವಹಿಸಲಿವೆ. 

Advertisement

ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಹರಾಜು:
ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ವೇಳೆ ಹರಾಜಿ ನಲ್ಲಿ 8 ಫ್ರಾಂಚೈಸಿಗಳು ಭಾಗವಹಿಸಲಿದ್ದಾರೆ. ದೇಶೀಯ ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರನ್ನು ಫ್ರಾಂಚೈಸಿಗಳು ಆಯ್ಕೆ ಮಾಡಲಿದ್ದಾರೆ.

ಅರ್ಹತೆಗಳೇನು?: ಪ್ರೊ ಕಬಡ್ಡಿಯಲ್ಲಿ ಆಟಗಾರರಿಗೆ ವಯಸ್ಸಿನ ಮಿತಿಯಿಲ್ಲ. 40 ವರ್ಷದವರೂ ಭಾಗವಹಿಸಬಹುದು. ಆದರೆ “ಹೇ ಕಬಡ್ಡಿ’ ಕೂಟದಲ್ಲಿ 35 ವರ್ಷ ಮೀರಿದವರಿಗೆ ಪಾಲ್ಗೊಳ್ಳುವ ಅವಕಾಶವಿಲ್ಲ ಎನ್ನುವ ಕಠಿಣ ನಿಯಮ ತರಲಾಗಿದೆ. ಪ್ರೊ ಕಬಡ್ಡಿಯಲ್ಲಿ ಪಾಲ್ಗೊಳ್ಳುತ್ತಿರುವ ಯಾವ ಆಟಗಾರರಿಗೂ ಕೂಟದಲ್ಲಿ ಅವಕಾಶವಿರುವುದಿಲ್ಲ. ಜತೆಗೆ ವಿದೇಶಿ ಆಟಗಾರರಿಗೆ ಕೂಟದಲ್ಲಿ ಅವಕಾಶವಿಲ್ಲ. ಪಕ್ಕಾ ದೇಶೀಯ ಆಟಗಾರರು ಮಾತ್ರ ಭಾಗವಹಿಸಬಹುದಾಗಿದೆ.

ಪ್ರೊ ಕಬಡ್ಡಿಗಿಂತ ಭಿನ್ನ: ಪ್ರೊಕಬಡ್ಡಿಯಲ್ಲಿ ಅಳವಡಿಸಿ ಕೊಂಡಿರುವ ಯಾವ ನಿಯಮಗಳನ್ನೂ ಇಲ್ಲಿ ಅಳವಡಿಸಿ ಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಜಯ ಕುಮಾರ್‌ ಹೇಳಿದ್ದಾರೆ. ಅವರಿಗಿಂತ ಭಿನ್ನವಾಗಿ, ಹೆಚ್ಚು ರೋಚಕವಾಗಿ ಪ್ರತಿ ಪಂದ್ಯಗಳನ್ನು ನಡೆಸಿಕೊಂಡು ಹೋಗಲಾಗುತ್ತದೆ. ಇದಕ್ಕಾಗಿ ಜಯ ಕುಮಾರ್‌, ಅರ್ಜುನ ಪ್ರಶಸ್ತಿ ವಿಜೇತ ರಾಜರತ್ನಂ, ಮಹಿಪಾಲ್‌ ಸಿಂಗ್‌ ಒಳಗೊಂಡ ತಜ್ಞ ತಾಂತ್ರಿಕ ಸಿಬ್ಬಂದಿ ತಂಡ ಹಗಲಿರುಳೆನ್ನದೆ ದುಡಿಯುತ್ತಿದೆ.

ಬಹುಮಾನ ಮೊತ್ತ 1 ಕೋಟಿ ರೂ.: ಮೊದಲ ಆವೃತ್ತಿಯಲ್ಲೇ ಕೂಟದ ಮೊತ್ತವನ್ನು 1ಕೋಟಿ ರೂ. ಹೆಚ್ಚು ಇಟ್ಟು ನಡೆಸಲು ಚಿಂತನೆ ನಡೆದಿದೆ. ಮುಂದಿನ ವಾರ ಬೆಂಗಳೂರಿನಲ್ಲಿ ಈ ಕುರಿತಂತೆ ಮಹತ್ವದ ಸಭೆ ನಡೆಯಲಿದೆ. ಅಲ್ಲಿ ನಿರ್ಧಾರವಾಗಲಿದೆ ಎಂದು ಜಯಕುಮಾರ್‌ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳ ಆಟಗಾರರಿಗೂ ಅವಕಾಶ:
ಪ್ರತಿಸಲವೂ ಕಬಡ್ಡಿ ಕೂಟ ನಡೆದಾಗ ಈಶಾನ್ಯ ರಾಜ್ಯದ ತಂಡಗಳನ್ನು ನಿರ್ಲಕ್ಷಿಸಲಾಗುತ್ತಿತ್ತು. ಆಟಗಾರರು ಪ್ರತಿಭಾವಂತರಾಗಿದ್ದರೂ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ. ಆದರೆ “ಹೇ ಕಬಡ್ಡಿ ಇಂಡಿಯನ್‌ ಲೀಗ್‌’ ಮೂಲಕ ಅವರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಅಲ್ಲದೆ ಗ್ರಾಮೀಣ ಭಾಗದ ಆಟಗಾರರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

4 ಮಹಿಳಾ ತಂಡಗಳು ಭಾಗಿ
ಹೇ ಕಬಡ್ಡಿ ಇಂಡಿಯನ್‌ ಕಬಡ್ಡಿ ಲೀಗ್‌’ ಕೂಟದ ಮೊದಲ ಆವೃತ್ತಿಯಲ್ಲಿ ನಾಲ್ಕು ಮಹಿಳಾ ತಂಡಗಳು ಕೂಡ ಭಾಗವಹಿಸುತ್ತಿವೆ. ಆದರೆ ಯಾವ ಯಾವ ರಾಜ್ಯದ ತಂಡಗಳು ಎನ್ನುವುದು ಅಂತಿಮಗೊಂಡಿಲ್ಲ. ಒಟ್ಟಾರೆ 50
ಆಟಗಾರ್ತಿಯರು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ ಎನ್ನುವುದಷ್ಟು ಖಚಿತ ಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next