ಲಕ್ನೋ: ಆತಿಥೇಯ ಯುಪಿ ಯೋಧಾ ತಂಡ ತವರಿನ ಪಂದ್ಯದಲ್ಲಿ ಮತ್ತೆ ಆಘಾತಕ್ಕೆ ಒಳಗಾಗಿದೆ. ಪ್ರೊ ಕಬಡ್ಡಿ ಲೀಗ್‌ನ ಲಕ್ನೋ ಚರಣದಲ್ಲಿ ಶುಕ್ರವಾರ ಯು ಮುಂಬಾ ತಂಡಕ್ಕೆ ಕೊನೆ ಕ್ಷಣದಲ್ಲಿ ಶರಣಾಗಿದ್ದ ಯುಪಿ ಯೋಧಾ ತಂಡ ಶನಿವಾರದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಗೆ 29-31 ಅಂಕಗಳಿಂದ ಸೋತು ನಿರಾಶೆ ಅನುಭವಿಸಿತು.
ಯುಪಿ ರವಿವಾರದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು ಎದುರಿಸಲಿದೆ. ದಿನದ ಇನ್ನೊಂದು ಪಂದ್ಯವು ಪಾಟ್ನಾ ಪೈರೇಟ್ಸ್ ಮತ್ತು ಪುನೇರಿ ಪಲ್ಟಾನ್ಸ್ ನಡುವೆ ನಡೆಯಲಿದೆ.
ಈ ಮೊದಲು ಸತತ 5 ಪಂದ್ಯಗಳಲ್ಲಿ ಸೋತು ಸೋಲಿನ ಸುಳಿಯಲ್ಲಿದ್ದ ತೆಲುಗು ಟೈಟಾನ್ಸ್ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 37-32 ರಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೈಟಾನ್ಸ್ ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ತಾನಾಡಿದ 10 ಪಂದ್ಯಗಳಲ್ಲಿ 2ನೇ ಗೆಲುವು ಪಡೆದಿದೆ.
ಟೈಟಾನ್ಸ್ ಉದ್ಘಾಟನಾ ಪಂದ್ಯದಲ್ಲಿ ತಲೈವಾಸ್ ವಿರುದ್ಧ ಗೆಲುವು ಪಡೆದಿತ್ತು. ಅನಂತರ ತನ್ನ 10ನೇ ಪಂದ್ಯದಲ್ಲಿ ಗೆಲುವು ಪಡೆದಿದೆ. ಮಧ್ಯದಲ್ಲಿ ಒಂದು ಪಂದ್ಯ ಟೈ ಆಗಿತ್ತು.ಇಲ್ಲಿನ ಬಾಬು ಬನಾರಸಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲಿಯೇ ಟೈಟಾನ್ಸ್ ಮೇಲುಗೈ ಸಾಧಿಸಿತ್ತು. ನಾಯಕ ರಾಹುಲ್ ಚೌಧರಿ (13 ಅಂಕ) ರೈಡಿಂಗ್‌ನಲ್ಲಿ ಯಶಸ್ವಿಯಾದರು. ಇದರಿಂದ ಮೊದಲ ಅವಧಿಯ ಅಂತ್ಯದಲ್ಲಿ ತೆಲುಗು ಟೈಟಾನ್ಸ್ 19-15 ರಿಂದ ಮುನ್ನಡೆ ಪಡೆದಿತ್ತು.
2ನೇ ಅವಧಿಯ ಆರಂಭದಲ್ಲಿ ಮುಂಬಾ ತಿರುಗೇಟು ನೀಡುವ ಸೂಚನೆ ನೀಡಿತ್ತು. ಅಂಕಗಳಿಕೆಯಲ್ಲಿ ಟೈಟಾನ್ಸ್ ಹಿಂದೆಯೇ ಮುಂಬಾ ಇತ್ತು. ಪಂದ್ಯ ಮುಗಿಯಲು ಇನ್ನು 6 ನಿಮಿಷ ಬಾಕಿ ಇರುವಾಗ ಮುಂಬಾ 28-29 ರಿಂದ ಅಲ್ಪ ಹಿನ್ನಡೆಯಲ್ಲಿತ್ತು. ಹೀಗಾಗಿ ಈ ಹಂತದಲ್ಲಿ ಪಂದ್ಯ ಮತ್ತೆ ಕುತೂಹಲದ ಘಟ್ಟ ತಲುಪಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟೈಟಾನ್ಸ್ ಚೇತರಿಕೆಯ ಪ್ರದರ್ಶನ ನೀಡಿತು. ಮುಂಬಾ ನಾಯಕ ಅನೂಪ್ ಕುಮಾರ್ ಸೂಪರ್ ಟ್ಯಾಕಲ್‌ನಲ್ಲಿ ಸಿಕ್ಕಿಬಿದ್ದರು. ಇದು ಟೈಟಾನ್ಸ್ ಗೆಲುವಿಗೆ ನೆರವಾಯಿತು.
ಪಂದ್ಯ ವೀಕ್ಷಿಸಿದ ಸುರೇಶ್ ರೈನಾ
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಕ್ರೀಡಾಂಗಣಕ್ಕೆ ಆಗಮಿಸಿ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಿ ದರು. ಎರಡೂ ಪಂದ್ಯಗಳನ್ನು ತಮ್ಮ ಸ್ನೇಹಿತರ ಜತೆ ಕುಳಿತು ನೋಡಿದರು. ರೈನಾ ಲಂಕಾ ಸರಣಿಗೆ ಆಯ್ಕೆ ಆಗದಿರುವ ಕಾರಣ ಲಕ್ನೋದಲ್ಲಿಯೇ ಇದ್ದಾರೆ.