ಬೆಂಗಳೂರು: ಬುಧವಾರ ಪ್ರೊ ಕಬಡ್ಡಿಯಲ್ಲಿ ರೋಚಕ ಹೋರಾಟವೊಂದು ನಡೆಯಿತು. ನಿಕಟ ಹಣಾಹಣಿಯಲ್ಲಿ ಯುಪಿ ಯೋಧಾ 41-39ರಿಂದ ತಮಿಳ್ ತಲೈವಾಸನ್ನು ಮಣಿಸಿತು.
ಕೊನೆಯ ಕ್ಷಣದವರೆಗೂ ಪೈಪೋಟಿ ನಡೆದು ಅಂತಿಮ ಹಂತದಲ್ಲಿ ಯುಪಿ ಗೆಲುವು ಸಾಧಿಸಿತು.
ಯುಪಿ ಮೊದಲ 20 ನಿಮಿಷಗಳಲ್ಲಿ 20 ಅಂಕ, ತಮಿಳ್ 22 ಅಂಕ ಗಳಿಸಿದ್ದವು. ಆನಂತರದ 20 ನಿಮಿಷಗಳಲ್ಲಿ ಪರಿಸ್ಥಿತಿ ತುಸು ಬದಲಾಯಿತು. ಇಲ್ಲಿ ಯುಪಿ 21, ತಮಿಳ್ 17 ಅಂಕ ಗಳಿಸಿತು. ಒಂದು ವೇಳೆ ತಮಿಳ್ ತಲೈವಾಸ್ ಇನ್ನಷ್ಟು ಯತ್ನಿಸಿದ್ದರೆ ಗೆಲುವು ಸಾಧಿಸುವ ಅವಕಾಶವೂ ಇತ್ತು. ಅದಕ್ಕೆ ಯುಪಿ ಅವಕಾಶ ನೀಡಲಿಲ್ಲ!
ಯುಪಿ ಪರ ಪ್ರೊ ಕಬಡ್ಡಿ ಇತಿಹಾಸದ ಅತೀ ದುಬಾರಿ ಆಟಗಾರ ಪ್ರದೀಪ್ ನರ್ವಾಲ್ ಅಮೋಘ ಆಟವಾಡಿದರು. 16 ಬಾರಿ ಎದುರಾಳಿ ಅಂಕಣಕ್ಕೆ ನುಗ್ಗಿದ ಅವರು 10 ಬಾರಿ ಯಶಸ್ಸು ಸಾಧಿಸಿ 10 ಅಂಕ ಗಳಿಸಿದರು. ಇನ್ನೊಬ್ಬ ದಾಳಿಗಾರ ಸುರೇಂದರ್ ಗಿಲ್ ಕೂಡ ಉತ್ತಮ ಪ್ರದರ್ಶನ ನೀಡಿದರು. ರೈಡಿಂಗ್‌ನಲ್ಲಿ ಅವರು ಒಟ್ಟು 13 ಅಂಕ ಸಂಪಾದಿಸಿದರು.
ಇದನ್ನೂ ಓದಿ:ಬೌಲರ್‌ಗಳ ತಿರುಗೇಟು; ಭಾರತಕ್ಕೆ ಏಕದಿನ ಸರಣಿ
ಖ್ಯಾತ ರಕ್ಷಣಾ ಆಟಗಾರ ಸುಮಿತ್ ಅವರು ಎದುರಾಳಿಗಳನ್ನು ಕೆಡವಿಕೊಳ್ಳುವ 8 ಯತ್ನಗಳಲ್ಲಿ 4 ಬಾರಿ ಯಶಸ್ವಿಯಾದರು. ಗಳಿಸಿದ ಅಂಕ 5. ತಮಿಳ್ ತಲೈವಾಸ್ ಪರ ಮಂಜೀತ್ (17 ದಾಳಿ, 12 ಅಂಕ), ಹಿಮಾಂಶು (9 ದಾಳಿ, 8 ಅಂಕ), ಅಜಿಂಕ್ಯ ಪವಾರ್ (15 ದಾಳಿ, 7 ಅಂಕ) ಉತ್ತಮ ದಾಳಿ ನಡೆಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ವಿರುದ್ಧ ತೆಲುಗು ಟೈಟಾನ್ಸ್ 32-34 ಅಂತರದಿಂದ ಸೋಲು ಕಂಡಿತು.