Advertisement

Pro Kabaddi League: ತೆಲುಗು ಟೈಟಾನ್ಸ್‌ ಅಬ್ಬರಕ್ಕೆ ತಣ್ಣಗಾದ ಬೆಂಗಳೂರು ಬುಲ್ಸ್‌

01:06 AM Oct 19, 2024 | Team Udayavani |

ಹೈದರಾಬಾದ್‌: ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಗೆ ಶುಕ್ರವಾರ ಅದ್ದೂರಿ ಚಾಲನೆ ಲಭಿಸಿದೆ. ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ 37- 29 ಅಂಕಗಳಿಂದ ಸೋಲನುಭವಿಸಿತು.

Advertisement

ಟಾಸ್‌ ಗೆದ್ದು ಕೋರ್ಟ್‌ ಆಯ್ದುಕೊಂಡ ಬೆಂಗಳೂರು ಬುಲ್ಸ್‌ಗೆ ತಮ್ಮದೇ ತಂಡದ ಹಳೇ ಆಟಗಾರ ಪವನ್‌ ಸೆಹ್ರಾವತ್‌ ಮೊದಲ ರೈಡ್‌ನಿಂದಲೇ ಕಾಡಲು ಆರಂಭಿಸಿದರು. ಮೊದಲ ರೈಡ್‌ನ‌ಲ್ಲೇ 2 ಅಂಕ ಗಳಿಸಿಕೊಂಡ ಪವನ್‌ ಕೊನೆಯವರೆಗೂ ಬೆಂಗಳೂರು ತಂಡವನ್ನು ಕಾಡಿ ತೆಲುಗು ಟೈಟನ್ಸ್‌ಗೆ 37-29 ಅಂಕಗಳ ಗೆಲುವು ತಂದುಕೊಟ್ಟರು.

ದಿನದ ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡವು ಯು ಮುಂಬಾ ತಂಡವನ್ನು 36-28 ಅಂಕಗಳಿಂದ ಸೋಲಿಸಿತು. ಡೆಲ್ಲಿ ತಂಡ ರೈಡಿಂಗ್‌ನಲ್ಲಿ 14 ಮತ್ತು ಟ್ಯಾಕಲ್‌ನಲ್ಲಿ 11ಅಂಕ ಪಡೆಯಲು ಯಶಸ್ವಿಯಾಗಿದೆ. ಅಶು ಮಲಿಕ್‌ 10 ಅಂಕ ಗಳಿಸಿದರು. ರೈಡಿಂಗ್‌ನಲ್ಲಿ ಮುಂಬಾ 20 ಅಂಕ ಪಡೆದರೂ ಟ್ಯಾಕಲ್‌ನಲ್ಲಿ ಪೂರ್ಣ ವಿಫ‌ಲವಾದ ಕಾರಣ ಸೋಲು ಕಾಣುವಂತಾಯಿತು.

ರೈಡಿಂಗ್‌ ವಿಭಾಗದಲ್ಲಿ ಬುಲ್ಸ್‌ ವಿಫ‌ಲ
ಕಳೆದ ಬಾರಿ ಪ್ಲೇ ಆಫ್ಗೇರಲು ವಿಫ‌ಲವಾಗಿದ್ದ ಬೆಂಗಳೂರು ಬುಲ್ಸ್‌ ಈ ಬಾರಿ ರೈಡಿಂಗ್‌ನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು. ಪ್ರೋ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ರೈಡಿಂಗ್‌ ಅಂಕ ಹೊಂದಿರುವ ಪರ್ದೀಪ್‌ ನರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ ಸಹ ರೈಡರ್‌ಗಳು ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಹಿನ್ನಡೆಯುಂಟಾಯಿತು. ಬೆಂಗಳೂರು ರೈಡರ್‌ಗಳು ರೈಡಿಂಗ್‌ನಲ್ಲಿ 10 ಅಂಕಗಳನ್ನಷ್ಟೇ ತರಲು ಶಕ್ತವಾದರು.

ಪವನ್‌ ಮಿಂಚು
ಸ್ಟಾರ್‌ ರೈಡರ್‌ ಪವನ್‌ ಸೆಹ್ರಾವತ್‌ ಆರಂಭದಿಂದಲೇ ಅಂಕ ಗಳಿಸಲು ಆರಂಭಿಸಿದರು. 11 ಯಶಸ್ವಿ ರೈಡ್‌ ಮಾಡಿದ ಪವನ್‌ 12 ಅಂಕ ಸಂಪಾದಿಸಿದರು. ಮೊದಲಾರ್ಧದಲ್ಲಿ 6 ಅಂಕ ಗಳಿಸಿಕೊಳ್ಳುವ ಮೂಲಕ ತಂಡಕ್ಕೆ 9 ಅಂಕಗಳ ಮುನ್ನಡೆ ತಂದುಕೊಟ್ಟರು. 2 ಬಾರಿ ಬೆಂಗಳೂರು ತಂಡ ಆಲೌಟ್‌ ಆಗಲು ಕಾರಣವಾದರು.

Advertisement

 - ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next