ಅಹ್ಮದಾಬಾದ್: ಪ್ರೊ ಕಬಡ್ಡಿಯ ಗುಜರಾತ್ ಚರಣದಲ್ಲಿ ಕೊನೆಯವರೆಗೂ ಅಭಿಮಾನಿಗಳ ಕುತೂಹಲ ಹಿಡಿದಿಟ್ಟುಕೊಂಡ ಪಂದ್ಯದಲ್ಲಿ ಯುಪಿ ಯೋಧಾ 39-32 ರಿಂದ ತೆಲುಗು ಟೈಟಾನ್ಸ್ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಕೂಟದಲ್ಲಿ ಯುಪಿ 3ನೇ ಜಯ ಸಾಧಿಸಿತು, ಟೈಟಾನ್ಸ್ ಆಡಿರುವ 8 ಪಂದ್ಯದಲ್ಲಿ 6ನೇ ಸೋಲು ಕಂಡಿತು. ಟೈಟಾನ್ಸ್ ಪರ ತಾರಾ ಆಟಗಾರ ರಾಹುಲ್ ಚೌಧರಿ ಮಾಡಿದ ಹೋರಾಟವೂ ವ್ಯರ್ಥವಾಯಿತು.
ಇಲ್ಲಿನ ಟ್ರಾನ್ಸ್ ಸ್ಟೇಡಿಯಾ ಅರೆನಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲ ರೈಡಿಂಗ್ ಮಾಡಿದ ಯುಪಿ ತಂಡದ ನಿತಿನ್ ತೋಮರ್ ಟೈಟಾನ್ಸ್‌ನ ಚಕ್ರವ್ಯೂಹದ ಬಲೆಯಲ್ಲಿ ಸಿಕ್ಕಿ ಬಿದ್ದರು. ಹೀಗಾಗಿ ಟೈಟಾನ್ಸ್ ಆರಂಭದಲ್ಲಿಯೇ ಅಂಕಗಳ ಖಾತೆ ತೆರೆಯಿತು. ಮರು ಕ್ಷಣದಲ್ಲಿಯೇ ಯುಪಿ ತಂಡದಲ್ಲಿರುವ ಕನ್ನಡಿಗ ರಿಶಾಂಗ್ ದೇವಾಡಿಗ ರೈಡಿಂಗ್ ಅಂಕ ತಂದು ಯುಪಿ ಖಾತೆ ತೆರೆಸಿದರು. ಹೀಗೆ ಅಂಕಗಳಿಕೆ ಸಮಾನ ಅಂತರದಲ್ಲಿ ಸಾಗುತ್ತಿತ್ತು. ಒಂದು ಹಂತದಲ್ಲಿ ಟೈಟಾನ್ಸ್ 6-7 ರಿಂದ ಅಲ್ಪ ಹಿನ್ನಡೆಯಲ್ಲಿತ್ತು.
ಒಂದೇ ರೈಡಿಂಗ್‌ನಲ್ಲಿ 4 ಅಂಕ ತಂದ ಚೌಧರಿ: 11ನೇ ನಿಮಿಷದಲ್ಲಿ ರೈಡಿಂಗ್‌ಗೆ ನುಗ್ಗಿದ ಟೈನಾನ್ಸ್ ನಾಯಕ ರಾಹುಲ್ ಚೌಧರಿ ಅಕ್ಷರಶಃ ಹುಲಿಯಂತೆ ಘರ್ಜಿಸಿ ನಾಲ್ವರನ್ನು ಔಟ್ ಮಾಡಿದರು. ಈ ಸೂಪರ್ ರೈಡಿಂಗ್ ಫಲವಾಗಿ ಟೈಟಾನ್ಸ್ 10-7 ರಿಂದ ಮುನ್ನಡೆ ಪಡೆಯಿತು. ಸಂಕಷ್ಟದಲ್ಲಿದ್ದ ಟೈಟಾನ್ಸ್‌ಗೆ ಇದು ನೆರವಿಗೆ ಬಂತು. ಆದರೆ ಯುಪಿ ಮತ್ತೆ ಚೇತರಿಕೆ ಕಂಡುಕೊಂಡಿತು. ಹೀಗಾಗಿ ಯುಪಿ ಕೆಲವೇ ನಿಮಿಷಗಳ ಅಂತರದಲ್ಲಿ 12-11ರಿಂದ ಮುನ್ನಡೆ ಪಡೆಯಿತು. ಅಂತಿಮವಾಗಿ ಮೊದಲ ಅವಧಿಯ ಅಂತ್ಯದಲ್ಲಿ ಯುಪಿ 14-13 ರಿಂದ ಅಲ್ಪ ಮುನ್ನಡೆ ಪಡೆಯಿತು.
ಕೊನೆ ಕ್ಷಣದಲ್ಲಿ ಯುಪಿ ಮೇಲುಗೈ: ಮೊದಲ ಅವಧಿಯಲ್ಲಿ ಸಮಬಲದ ಹೋರಾಟದಲ್ಲಿ ಸಾಗುತ್ತಿದ್ದ ಪಂದ್ಯ 2ನೇ ಅವಧಿಯ ಆರಂಭದಲ್ಲಿಯೂ ಸಮಬಲ ಕಂಡಿತು. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಒಮ್ಮೆ 18-18, ಮತ್ತೂಮ್ಮೆ 20-20 ರಿಂದ ಸಮಬಲದಲ್ಲಿತ್ತು. ಆದರೆ ಈ ಹಂತದಲ್ಲಿ ಯುಪಿ ಕೋಟೆ ಬರಿದಾಗುತ್ತಾ ಬಂತು. ಆಟಗಾರರೆಲ್ಲ ಒಬ್ಬಬ್ಬರಾಗಿಯೇ ಔಟ್ ಆಗತೊಡಗಿದರು. ಅಂಕ 21-21 ಇರುವಾಗ ಯುಪಿ ಅಂಕಣದಲ್ಲಿ ಉಳಿದುಕೊಂಡಿದ್ದ ಏಕೈಕ ಆಟಗಾರ ನಿತಿನ್ ತೋಮರ್ ಟೈಟಾನ್ಸ್‌ನ ರಕ್ಷಣಾ ಬಲೆಗೆ ಬಿದ್ದರು. ಇದರಿಂದ ಮೊದಲ ಬಾರಿಗೆ ಯುಪಿ ಕೋಟೆ 28ನೇ ನಿಮಿಷದಲ್ಲಿ ಬರಿದಾಗಿತು. ಈ ಸಂದರ್ಭದಲ್ಲಿ ಟೈಟಾನ್ಸ್ 24-21 ಮುನ್ನಡೆ ಸಾಧಿಸಿತು. ಆದರೆ ಯುಪಿ ಮತ್ತೆ 25-25 ರಿಂದ ಸಮಬಲ ಪಡೆಯುವಲ್ಲಿ ಯಶಸ್ವಿಯಾಯಿತು. ಒಂದೊಂದೆ ಅಂಕಗಳನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದ ಯುಪಿ ಪಂದ್ಯದ ಮೇಲೆ ಹಿಡಿತ ಸಾಧಿಸತೊಡಗಿತು. ಇದರಿಂದ ಯುಪಿ 31-28 ರಿಂದ ನಾಲ್ಕು ಅಂಕಗಳ ಮುನ್ನಡೆ ಪಡೆಯಿತು.
ರಕ್ಷಿತ್‌ಗೆ ಗಂಭೀರ ಗಾಯ: ಟೈಟಾನ್ಸ್ ತಂಡದ ರಕ್ಷಿತ್ ರೈಡಿಂಗ್‌ಗೆ ಹೋಗಾಗ ಬಿದ್ದು ಗಾಯಕ್ಕೆ ತುತ್ತಾದರು. ಮೋಣಕಾಲಿಗೆ ಗಂಭೀರ ಗಾಯವಾಗಿರುವ ಕಾರಣ ಕೋರ್ಟ್‌ನಿಂದಲೇ ಹೊರ ನಡೆದರು. ಮೇಲ್ನೋಟಕ್ಕೆ ಸಣ್ಣ ಪ್ರಮಾಣದ ಗಾಯದಂತೆ ಕಂಡು ಬಂದಿದೆ. ಇವರ ಆರೋಗ್ಯ ಪರಿಸ್ಥಿತಿ ಬಗ್ಗೆ ತಂಡದ ಮೂಲಗಳು ಇನ್ನಷ್ಟೇ ಮಾಹಿತಿ ನೀಡಬೇಕಿದೆ.