Advertisement

ನಾಯಕತ್ವ ಬಯಸದೇ ಬಂದ ಭಾಗ್ಯ

03:35 AM Jun 29, 2017 | Team Udayavani |

12 ತಂಡಗಳೊಂದಿಗೆ, 138 ಪಂದ್ಯಗಳೊಂದಿಗೆ ಬೃಹತ್‌ ರೂಪ ಪಡೆದಿರುವ 5ನೇ ಆವೃತ್ತಿ ಪ್ರೊ ಕಬಡ್ಡಿ ಕನ್ನಡಿಗರಿಗೂ ಹಲವು ಶುಭ ಸಮಾಚಾರಗಳನ್ನು ತಂದಿದೆ. ರಾಜ್ಯದ ಉತ್ತಮ ಆಟಗಾರರಲ್ಲಿ ಒಬ್ಬರಾಗಿರುವ ಸುಕೇಶ್‌ ಹೆಗ್ಡೆ ಗುಜರಾತ್‌ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಪ್ರೊ ಕಬಡ್ಡಿಯಲ್ಲಿ ನಾಯಕರಾಗಿ ಆಯ್ಕೆಯಾದ ಮೊದಲ ಕನ್ನಡಿಗ ಸುಕೇಶ್‌ ಎನ್ನುವುದು ಗಮನಿಸಬೇಕಾದ ಸಂಗತಿ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕರ್ಣಾಕರ ಮತ್ತು ಪದ್ಮಾವತಿ ದಂಪತಿಯ
ಪುತ್ರ ಸುಕೇಶ್‌ ಈ ಸಂತಸದ ಸಂದರ್ಭದಲ್ಲಿ ಉದಯವಾಣಿ ಜತೆ ಮಾತನಾಡಿದ್ದಾರೆ.

Advertisement

ನಾಯಕನಾಗುವ ನಿರೀಕ್ಷೆ ಇತ್ತಾ?
ನಾಯಕನಾಗುತ್ತೇನೆ ಎಂಬ ನಿರೀಕ್ಷೆ ಖಂಡಿತ ಇರಲಿಲ್ಲ. ಇದೊಂದು ಅನಿರೀಕ್ಷಿತ ಅವಕಾಶ. ಸಮರ್ಥವಾಗಿ ನಿಭಾಯಿಸುತ್ತೇನೆ ಅನ್ನುವ ವಿಶ್ವಾಸವಿದೆ. ಕಳೆದ ನಾಲ್ಕು ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್‌ ತಂಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದರಿಂದ ಇಂತಹ ಜವಾಬ್ದಾರಿ ಬಂದಿದೆ. ಖುಷಿ ಜತೆಗೆ ಕರ್ತವ್ಯದ ಎಚ್ಚರಿಕೆಯೂ ಇದೆ.
ಹೀಗಾಗಿ ಎಲ್ಲೂ ಮೈಮರೆಯುವಂತಿಲ್ಲ.

ನಾಯಕತ್ವ ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತಾ?
ಆ ರೀತಿ ಅನ್ನಿಸುತ್ತಿಲ್ಲ. ನನ್ನ ಆಟವನ್ನು ನಾನು ಸಹಜವಾಗಿ ಆಡುತ್ತೇನೆ. ಆದರೆ ಇದೊಂದು ಹೊಸ ಜವಾಬ್ದಾರಿ. ಇಲ್ಲಿ ನನ್ನ ಆಟದ ಜತೆಗೆ ತಂಡದ ಇತರೆ ಆಟಗಾರರ ಪ್ರದರ್ಶನ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ನಾಯಕತ್ವ ಇದೇ ಮೊದಲಾಗಿರುವುದರಿಂದ ಏನಾಗುತ್ತದೆ ಎಂದು ಕಾದು ನೋಡಬೇಕು.

ಚಾಂಪಿಯನ್‌ ಆಗುವ ವಿಶ್ವಾಸವಿದೆಯಾ? ನಿಮ್ಮ ತಂತ್ರಗಳು ಏನು?
ಚಾಂಪಿಯನ್‌ ಆಗಬೇಕು ಅನ್ನುವ ಆತ್ಮವಿಶ್ವಾಸದಲ್ಲಿಯೇ ಕಣಕ್ಕೆ ಇಳಿಯುತ್ತೇವೆ. ಆದರೆ ನಮ್ಮದು ಹೊಸ ತಂಡ. ಅನುಭವಿ ಆಟಗಾರರ ಕೊರತೆ ಇದೆ. ಆದರೂ ಛಲ ಬಿಡುವುದಿಲ್ಲ. ಆರಂಭದಲ್ಲಿ 4 ಪಂದ್ಯ ಆಡಿದ ಮೇಲೆ ನಮ್ಮ ತಂಡದ ಗುಣ ಮಟ್ಟ ಹೇಗಿದೆ? ಮುಂದೆ ಹೇಗೆ ತೆಗೆದುಕೊಂಡು ಹೋಗಬೇಕು ಅನ್ನುವುದು ತಿಳಿಯುತ್ತದೆ. ಎಲ್ಲಾ ತಂಡಗಳಲ್ಲಿಯೂ ಆಟಗಾರರ ಬದಲಾವಣೆಗಳು ಆಗಿರುವುದರಿಂದ ಈಗಲೇ ತಂತ್ರವನ್ನು ರೂಪಿಸಲಾಗದು. ಪಂದ್ಯಗಳು ನಡೆದಂತೆ
ಆ ಬಗ್ಗೆ ತಿಳಿಯುತ್ತದೆ.

ಪ್ರೊ ಕಬಡ್ಡಿಯಿಂದ ಜೀವನ ಬದಲಾವಣೆ ಆಯ್ತಾ?
ಪ್ರೊ ಕಬಡ್ಡಿಗಿಂತ ಹಿಂದಿನ ಸುಕೇಶ್‌ ಮತ್ತು ಪ್ರೊ ಕಬಡ್ಡಿ ಆರಂಭವಾದ ನಂತರ ಕಾಣುವ ಸುಕೇಶ್‌ನಲ್ಲಿ ವ್ಯತ್ಯಾಸವಿದೆ. ನಾನು ತುಂಬಾ ಬಡ ಕುಟುಂಬದಿಂದ ಬಂದವನು. ಜನರಿಗೆ ನನ್ನ ಪರಿಚಯವೂ ಇರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟದಲ್ಲಿತ್ತು. ಆದರೆ ಪ್ರೊ ಕಬಡ್ಡಿಗೆ ಬಂದ ಮೇಲೆ ಜನರಿಗೆ ನನ್ನ ಪರಿಚಯವಾಗಿದೆ. ಎಲ್ಲೇ ಕಂಡರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಆರ್ಥಿಕವಾಗಿ ಚೇತರಿಸಿಕೊಂಡಿದ್ದೇನೆ. ಸಂಬಂಧಿಕರು ಮನೆಗೆ ಬಾ ಅಂತ ಫೋನ್‌ ಮಾಡಿ ಕರೆಯುತ್ತಾರೆ.

Advertisement

ನೀವು ಕಬಡ್ಡಿಗೆ ಬಂದಿದ್ದು ಹೇಗೆ?
ಶಾಲಾ ಹಂತದಿಂದಲೂ ನಾನು ಕಬಡ್ಡಿಯಲ್ಲಿ ಪಾಲ್ಗೊಳ್ಳುತ್ತಿದ್ದೆ. ಶಿಕ್ಷಣದತ್ತ ಆಸಕ್ತಿ ಕಮ್ಮಿ ಇತ್ತು. ಹೀಗಾಗಿ ಎಸ್‌ಎಸ್‌ಎಲ್‌ಸಿಯಲ್ಲಿಯೇ ಅನುತ್ತೀರ್ಣನಾದೆ. ಆ ನಂತರ ಪಾಸ್‌ ಮಾಡಿಕೊಂಡೆ. ಪಿಯುಸಿ ನಂತರ ಆಳ್ವಾಸ್‌ನಲ್ಲಿ ನಡೆದ 1 ತಿಂಗಳ ಕಬಡ್ಡಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದೆ. ಅಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದಾಗಿ ವಿಜಯ ಬ್ಯಾಂಕ್‌ ತಂಡ, ರಾಷ್ಟ್ರೀಯ ತಂಡ, ಪ್ರೊ ಕಬಡ್ಡಿಯಲ್ಲಿ ಆಡುವ ಅವಕಾಶ ದೊರಕಿತು.

ಪ್ರೊ ಕಬಡ್ಡಿಯಲ್ಲಿ ತಾರೆಯಾಗಿ ಬೆಳೆಯಬಹುದೆನ್ನುವ ನಿರೀಕ್ಷೆ ಇತ್ತಾ?
ಆರಂಭದಲ್ಲಿ ಪ್ರೊ ಕಬಡ್ಡಿಗೆ ಬಂದಾಗ ಖಂಡಿತ ನಿರೀಕ್ಷೆ ಇರಲಿಲ್ಲ. ಇಂದು ಐಪಿಎಲ್‌ನಂತೆ ಯಶಸ್ವಿಯಾಗಿ ಬೆಳೆದಿದೆ. ತುಂಬಾ ಖುಷಿಯಾಗುತ್ತಿದೆ. ಕ್ರಿಕೆಟ್‌ ಆಟಗಾರರಂತೆ ನಮ್ಮನ್ನು ಜನ ಗುರುತಿಸುತ್ತಾರೆ. ಸೆಲ್ಫಿ ತೆಗೆದುಕೊಳ್ಳುತ್ತಾರೆ. ಕಬಡ್ಡಿ ಬೆಳವಣಿಗೆಗೆ ಇದು ಸಹಾಯಕ.

ಕಬಡ್ಡಿ ನಿವೃತ್ತಿಯ ನಂತರ ಏನು?
ತಲೆಯಲ್ಲಿ ತುಂಬಾ ಯೋಚನೆಗಳಿವೆ. ಆದರೆ ಎಲ್ಲವನ್ನು ಹೇಳಿಕೊಳ್ಳಲು ಆಗುವುದಿಲ್ಲ. ಮುಖ್ಯವಾಗಿ ಕರ್ನಾಟಕದಲ್ಲಿಯೇ
ಕಬಡ್ಡಿ ಅಕಾಡೆಮಿ ತೆರೆಯುವ ಆಸೆ ಇದೆ. ಯುವ ಕಬಡ್ಡಿ ಆಟಗಾರರನ್ನು ತಯಾರಿಸಬೇಕು ಅನ್ನುವ ಉದ್ದೇಶವಿದೆ. ಆದರೆ
ಅದಕ್ಕೆಲ್ಲ ಕಾಲ ಕೂಡಿ ಬರಬೇಕು. 

ಮನೆಯ ಆರ್ಥಿಕ ಪರಿಸ್ಥಿತಿ ಹೇಗಿದೆ?
ಚಿಕ್ಕವನಿರುವಾಗ ತುಂಬಾ ಕಷ್ಟವಿತ್ತು. ತಂದೆ ಖಾಸಗಿ ವಾಹನದ ಚಾಲಕರಾಗಿದ್ದಾರೆ. ತಾಯಿ ಹೃದಯ ರೋಗಿ. ತುಂಬಾ
ಕಷ್ಟದಲ್ಲಿಯೇ ಜೀವನ ನಡೆಸಿದ್ದೇವೆ. ಆದರೆ ಈಗ ಒಬ್ಬ ಅಣ್ಣ ಸೇನೆಯಲ್ಲಿದ್ದಾರೆ. ನಾನು ಕಬಡ್ಡಿಯಲ್ಲಿದ್ದೇನೆ. ವಿಜಯ ಬ್ಯಾಂಕ್‌ ನಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ಇದೆಲ್ಲದರಿಂದ ಆರ್ಥಿಕವಾಗಿ ಸುಧಾರಿಸಿಕೊಂಡಿದ್ದೇನೆ.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next