ಚೆನ್ನೈ: ಬಹಳಷ್ಟು ಜನಪ್ರಿಯತೆ ಪಡೆಯುತ್ತಿರುವ ಪ್ರೊ ಕಬಡ್ಡಿಯ ಚೆನ್ನೈ ಚರಣದ ಪಂದ್ಯಗಳು ಶುಕ್ರವಾರದಿಂದ ಇಲ್ಲಿನ ಜವಾಹರ್‌ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿರುವ ತಮಿಳ್ ತಲೈವಾಸ್ ತವರಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಈ ಮೂಲಕ ಗರಿಷ್ಠ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸುವತ್ತ ಗಮನ ಹರಿಸಬೇಕಾಗಿದೆ.
ತಮಿಳ್ ತಲೈವಾಸ್ ಸದ್ಯ 10 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದೆ. ಇನ್ನೂ ಗೆಲುವಿನ ಸವಿ ಕಾಣದ ತೆಲುಗು ಟೈಟಾನ್ಸ್ ಕೊನೆಯ (12ನೇ) ಸ್ಥಾನದಲ್ಲಿದೆ. ತೆಲುಗು ಆಡಿದ ಐದು ಪಂದ್ಯಗಳಲ್ಲಿ ಸೋತು ಹೀನಾಯ ನಿರ್ವಹಣೆ ನೀಡಿದೆ. ಸದ್ಯ ಅಗ್ರಸ್ಥಾನದಲ್ಲಿರುವ ಪುನೇರಿ ಪಲ್ಟಾನ್ಸ್ ಮತ್ತು ಹರಿಯಾಣ ಸ್ಟೀಲರ್ ಗರಿಷ್ಠ ನಾಲ್ಕು ಪಂದ್ಯಗಳಲ್ಲಿ ಗೆದ್ದ ಸಾಧನೆ ಮಾಡಿದೆ. ಪುನೇರಿ ಪಲ್ಟಾನ್ಸ್ ಕಳೆದ ವಾರ ನಡೆದ ತವರಿನ ಪಂದ್ಯಗಳಲ್ಲಿ ಅಮೋಘ ನಿರ್ವಹಣೆ ನೀಡಿ ಗಮನ ಸೆಳೆದಿದೆ. ಒಟ್ಟಾರೆ 26 ಅಂಕ ಹೊಂದಿರುವ ಪುನೇರಿ ಸದ್ಯ ಅಗ್ರಸ್ಥಾನದಲ್ಲಿದೆ.
ದ್ವಿತೀಯ ಸ್ಥಾನದಲ್ಲಿರುವ ಬೆಂಗಾಲ್ ವಾರಿಯರ್ 5 ಪಂದ್ಯಗಳಲ್ಲಿ ಆಡಿದ್ದು ಮೂರರಲ್ಲಿ ಗೆದ್ದು ಒಟ್ಟಾರೆ 21 ಅಂಕ ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ ಆರು ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಗೆದ್ದು 20 ಅಂಕ ಪಡೆದಿದೆ.
ಈ ಬಾರಿ ಪ್ರತಿಯೊಂದು ತಂಡವೂ ತವರಿನಲ್ಲಿ ಆಡುವ ಅವಕಾಶ ಪಡೆಯಲಿದೆ. ಸದ್ಯ ಅಹ್ಮದಾಬಾದ್, ಬೆಂಗಳೂರು ಮತ್ತು ಪುಣೆಯಲ್ಲಿ ಪಂದ್ಯಗಳು ನಡೆದಿದ್ದು ಶುಕ್ರವಾರದಿಂದ ಚೆನ್ನೈಯಲ್ಲಿ ಪಂದ್ಯಗಳು ಜರಗಲಿವೆ. ಬೆಂಗಳೂರು ಬುಲ್ಸ್ ತಂಡವು ತವರಿನ ಪಂದ್ಯಗಳಲ್ಲಿ ಮಿಂಚಲು ವಿಫಲವಾಗಿತ್ತು. ಆದರೆ ಪುನೇರಿ ತವರಿನ ಪಂದ್ಯಗಳಲ್ಲಿ ಅಮೋಘವಾಗಿ ಆಡಿತ್ತು.
ಶುಕ್ರವಾರ ಎರಡು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯವು ತಮಿಳ್ ತಲೈವಾಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವೆ ನಡೆಯಲಿದೆ. ಇನ್ನೊಂದು ಪಂದ್ಯವು ಹರಿಯಾಣ ಸ್ಟೀಲರ್ ಮತ್ತು ತೆಲುಗು ಟೈಟಾನ್ಸ್ ನಡುವೆ ಜರಗಲಿದೆ.
ಇಂದಿನ ಪಂದ್ಯಗಳು
1. ತಮಿಳ್-ಪಾಟ್ನಾ ಆರಂಭ: ರಾತ್ರಿ 8.00
2. ಹರ್ಯಾಣ-ತೆಲುಗು ಆರಂಭ: ರಾತ್ರಿ 9.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್