Advertisement

8ನೇ ಆವೃತ್ತಿ ಪ್ರೊ ಕಬಡ್ಡಿ : ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ

10:48 PM Oct 05, 2021 | Team Udayavani |

ಬೆಂಗಳೂರು: ಮತ್ತೆ ಪ್ರೊ ಕಬಡ್ಡಿ ಕಲರವ ಕೇಳಿಬರಲಿದೆ. 8ನೇ ಆವೃತ್ತಿಯ ಪಂದ್ಯಾವಳಿ ಡಿ. 21ರಂದು ಆರಂಭಗೊಳ್ಳಲಿದೆ. ವಿಶೇಷವೆಂದರೆ, ಈ ಕೂಟದ ಎಲ್ಲ ಪಂದ್ಯಗಳು ಬೆಂಗಳೂರಿನ “ಕಂಠೀರವ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆಯುವುದು. ಟೂರ್ನಿಯ ಆಯೋಜಕ ಸಂಸ್ಥೆ ಮಾರ್ಷಲ್‌ ಸ್ಪೋರ್ಟ್ಸ್ ಈ ಕುರಿತು ಮಂಗಳವಾರ ಮಾಹಿತಿ ನೀಡಿದೆ.

Advertisement

ಈ ಬಗ್ಗೆ ಮಾತನಾಡಿದ ಮಾರ್ಷಲ್‌ ಸ್ಪೋರ್ಟ್ಸ್ ಕ್ಲಬ್‌ನ ಸಿಇಒ ಅನುಪಮ್‌ ಗೋಸ್ವಾಮಿ, “ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯನ್ನು ಆಯೋಜಿಸಲು ಎಲ್ಲರ ಹಿತದೃಷ್ಟಿಯಿಂದ ಬೆಂಗಳೂರೇ ಸೂಕ್ತ ಸ್ಥಳ ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಂದ್ಯಗಳನ್ನು ಕೋವಿಡ್‌-19 ಮಾರ್ಗಸೂಚಿಯನ್ವಯ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಪ್ರೇಕ್ಷಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ’ ಎಂದರು.

ಕೋವಿಡ್‌-19 ಕಾಟ ತಗ್ಗಿದ ಬಳಿಕ ಇದು ಭಾರತದಲ್ಲಿ ನಡೆಯಲಿರುವ ಪ್ರಮುಖ ಒಳಾಂಗಣ ಕ್ರೀಡಾಕೂಟವಾಗಿರಲಿದೆ. ಕೋವಿಡ್‌ ಭೀತಿಯಿಂದಾಗಿ 2020ರಲ್ಲಿ ಪ್ರೊ ಕಬಡ್ಡಿ ಲೀಗ್‌ ನಡೆದಿರಲಿಲ್ಲ.

ಒಂದೇ ತಾಣಕ್ಕೆ ಸೀಮಿತ
ಈ ಹಿಂದೆ ಎಲ್ಲ 12 ತಂಡಗಳ ತವರು ಮೈದಾನಗಳಲ್ಲಿ ಸುದೀರ್ಘ‌ 3 ತಿಂಗಳ ಕಾಲ ಪ್ರೊ ಕಬಡ್ಡಿ ಟೂರ್ನಿ ನಡೆಯುತ್ತಿತ್ತು. ಆದರೆ ಕೋವಿಡ್‌ ಮುನ್ನೆಚ್ಚರಿಕೆಯ ಕಾರಣ ಈ ವರ್ಷ ಎಲ್ಲ ಪಂದ್ಯಗಳನ್ನು ಒಂದೇ ತಾಣಕ್ಕೆ ಸೀಮಿತಗೊಳಿಸಲಾಗುತ್ತಿದೆ. ಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರಿಗೆ ಲಸಿಕೆ ಕಡ್ಡಾಯವಾಗಿದ್ದು, ಟೂರ್ನಿಯ ಆರಂಭಕ್ಕೆ ಕನಿಷ್ಠ 14 ದಿನ ಮೊದಲೇ ಎಲ್ಲ ತಂಡಗಳು ಬೆಂಗಳೂರಿನಲ್ಲಿ ಹಾಜರಿರಬೇಕಿದೆ ಎಂದು ಗೋಸ್ವಾಮಿ ತಿಳಿಸಿದರು.

ಇದನ್ನೂ ಓದಿ:ಐಎಸ್‌ಎಸ್‌ಎಫ್ ಜೂನಿಯರ್‌ ಶೂಟಿಂಗ್‌: ತೋಮರ್‌ ವಿಶ್ವದಾಖಲೆ

Advertisement

ಪ್ರೊ ಕಬಡ್ಡಿ ಆತಿಥ್ಯಕ್ಕೆ ಜೈಪುರ ಮತ್ತು ಅಹ್ಮದಾಬಾದ್‌ ರೇಸ್‌ನಲ್ಲಿದ್ದವು. ಆದರೆ ಕೊರೊನಾ ನಿಯಂತ್ರಣದಲ್ಲಿರುವ ಕಾರಣ ಮತ್ತು ಉತ್ತಮ ಮೂಲಭೂತ ಸೌಕರ್ಯ ಹೊಂದಿರುವ, ಬಯೋಬಬಲ್‌ ವಾತಾವರಣವಿರುವ ಬೆಂಗಳೂರು ನಗರವನ್ನು ಆಯ್ಕೆ ಮಾಡಲಾಯಿತು ಎಂದು ಗೋಸ್ವಾಮಿ ತಿಳಿಸಿದರು.ಆಟಗಾರರ ಹರಾಜು ಪ್ರಕ್ರಿಯೆ ಕಳೆದ ಆ. 29ರಿಂದ 31ರ ತನಕ ಮುಂಬಯಿಯಲ್ಲಿ ನಡೆದಿತ್ತು.

ಮುಖ್ಯಮಂತ್ರಿ ಬೊಮ್ಮಾಯಿ ಸ್ವಾಗತ
“ಕಬಡ್ಡಿ ಭಾರತೀಯ ಮಣ್ಣಿನ ಕ್ರೀಡೆಯಾಗಿದ್ದು, ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯುವುದನ್ನು ನಾವು ಸ್ವಾಗತಿಸುತ್ತೇವೆ. ಈ ಕ್ರೀಡಾಕೂಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ’ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next