Advertisement
ಇದಕ್ಕೆ ಕಾರಣವೂ ಇದೆ. ಗ್ರಾಮೀಣ ಪ್ರದೇಶದಲ್ಲಿ ಯುವಕರು ಗುಂಪು ಕಟ್ಟಿಕೊಂಡು ತಮ್ಮ ದೇಹವನ್ನು ಸದೃಢಗೊಳಿಸಲು ಆಡುತ್ತಿದ್ದ ಆಟ ಕಬಡ್ಡಿ. ಭಾರತದಲ್ಲಿ ಹಾಕಿ, ಪುಟ್‌ಬಾಲ್, ವಾಲಿಬಾಲ್ ಇರುವಂತೆ 2014ರಲ್ಲಿ ಪ್ರೊ ಕಬಡ್ಡಿ ಲೀಗ್ ಆರಂಭವಾಗಿ ವಿವಿಧ ಕ್ರೀಡೆಗಳಿಗೆ ಸಿಗದ ಮನ್ನಣೆ ಕೆಲವೇ ವರ್ಷಗಳಲ್ಲಿ ಕಬಡ್ಡಿಗೆ ಸಿಕ್ಕಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪ್ರೊ ಕಬಡ್ಡಿ ಜೋರಾಗಿ ಸದ್ದು ಮಾಡುತ್ತಿದೆ. ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಗಳು ಆಟಗಾರರ ಪಾಲಿಗೆ ಅಕ್ಷಯ ಪಾತ್ರೆಯಾಗಿದೆ. ಅಲ್ಲದೆ, ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಇದೀಗ ಚೆನ್ನೈನಲ್ಲಿ ಆರಂಭಗೊಂಡಿರುವ 6ನೇ ಪ್ರೊ ಕಬಡ್ಡಿ ಪಂದ್ಯಾವಳಿ ಕ್ರೀಡಾಭಿಮಾನಿಗಳ ಮೈಮನ
ಆವರಿಸುತ್ತಿದೆ. ಪ್ರೊ ಕಬಡ್ಡಿಯ ಸೊಬಗನ್ನು ವೀಕ್ಷಿಸಲು ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನರು ಕಾಯುತ್ತಿದ್ದಾರೆ. ಪಂದ್ಯ ಪ್ರಾರಂಭವಾಯಿತೆಂದರೆ ಹಳ್ಳಿ ಜನರು ಮನೆ ಅಥವಾ ಅಂಗಡಿ ಮುಂಭಾಗದಲ್ಲಿ ಟಿವಿ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೆ, ಇಂದಿನ ಯುವಕರು ಕ್ರಮೇಣ ಕ್ರಿಕೆಟ್ ಆಡುವುದನ್ನು ನಿಲ್ಲಿಸಿ ಕಬಡ್ಡಿಯತ್ತ ವಾಲುತ್ತಿದ್ದಾರೆ ಎಂದು ಹೇಳಿದರೂ ತಪ್ಪಾಗಲಾರದು. ಅಪ್ಪಟ ದೇಸಿ ಕ್ರೀಡೆಯಾದ ಕಬಡ್ಡಿ ಈಗ ಭಾರೀ ಸಂಚಲನವನ್ನುಂಟು ಮಾಡುತ್ತಿದೆ. ಆವೃತ್ತಿಯಿಂದ ಆವೃತ್ತಿಗೆ ಪ್ರೊ ಕಬಡ್ಡಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ ಆಟಗಾರನಿಗೆ ಬೇಕು ಶಕ್ತಿ, ಯುಕ್ತಿ
ತಮಿಳುನಾಡು ಮೂಲದ ಈ ಕಬಡ್ಡಿಗೆ ಮೈದಾನವಿದ್ದರೆ ಸಾಕು, ಯಾವುದೇ ಪರಿಕರಗಳು, ಖರ್ಚಿಲ್ಲದೆ ಎಲ್ಲರನ್ನೂ ಆಕರ್ಷಿಸುತ್ತದೆ. 45 ನಿಮಿಷಗಳ ಕಾಲ ನಡೆಯುವ ಕಬಡ್ಡಿ ಪಂದ್ಯ ರೋಚಕವಾಗಿರುತ್ತದೆ. ಇಲ್ಲಿ ಪ್ರತಿಯೊಬ್ಬ ಆಟಗಾರನೂ ಕೂಡಾ ಪಾದರಸದಂತೆ ಇರಬೇಕಾಗುತ್ತದೆ. ಆಟಗಾರ ಮತ್ತು ಅವನ ಎದುರಾಳಿ ಪರಸ್ಪರ ದೈಹಿಕ ಬಲದಿಂದ ಹೋರಾಟ ಮಾಡಿ ಗೆಲ್ಲಬೇಕಾಗುತ್ತದೆ. ಶಕ್ತಿಯ ಜೊತೆಯಲ್ಲಿ ಸಾಹಸ, ಧೈರ್ಯದೊಂದಿಗೆ ಎದುರಾಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸುವ ಮಾನಸಿಕ ಸ್ಥೈರ್ಯ ಇರಬೇಕಾಗಿದೆ. ಆಟಗಾರ ಒಂದೇ ಉಸಿರಿನಲ್ಲಿ ಕಬಡ್ಡಿ ಕಬಡ್ಡಿ ಎಂದು ಹೇಳುತ್ತಾ, ತನ್ನ ಎದುರಾಳಿಯ ತಂಡದ ಜನರನ್ನು ಮುಟ್ಟಿಸಿ, ಅವರಿಂದ ಪಾರಾಗಿ ತನ್ನ ಅಂಗಣಕ್ಕೆ ಬರುವುದೇ ಒಂದು ತಾಕತ್ತಾಗಿದೆ. ಕಬಡ್ಡಿ ಆಟದಲ್ಲಿ ಶಾರೀರಿಕ ಶಕ್ತಿ, ಮಾನಸಿಕ ಸ್ಥೈರ್ಯವನ್ನು ಪ್ರದರ್ಶಿಸಬೇಕಾಗುತ್ತದೆ. ಏಕೆಂದರೆ ಕಬಡ್ಡಿ ಕ್ರೀಡಾಪಟುಗಳು ರೈಡಿಂಗ್ ಮಾಡುವಾಗ ಎದುರಾಳಿಗಳೆಲ್ಲರೂ ಒಮ್ಮೆಲೆ ಬಂದು ಮೈಮೇಲೆ ಬೀಳುತ್ತಾರೆ. ಎದುರಾಳಿಯನ್ನು ಹಿಡಿಯುವಾಗ ರೈಡರ್ ಒದೆಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಆಟಗಾರರು ಅದನ್ನು ಲೆಕ್ಕಿಸದೆ ಅಂಕಣದಲ್ಲಿ ಇರುವಷ್ಟು ಕಾಲ ಶಕ್ತಿ ಮತ್ತು ಸ್ಥೈರ್ಯವನ್ನು ಪ್ರದರ್ಶಿಸುವುದರೊಂದಿಗೆ ಅದನ್ನು ವೃದ್ಧಿಸಿಕೊಳ್ಳುತ್ತಾರೆ. ದೇಸಿ ಕ್ರೀಡಾ ಕ್ಷೇತ್ರದಲ್ಲಿ ಸಾರ್ವಜನಿಕರ ಗಮನ ಸೆಳೆಯಲು ಪೊ› ಕಬಡ್ಡಿ ಲೀಗ್ ವೇದಿಕೆಯಾಗಿದೆ. ಇದಲ್ಲದೆ ಗ್ರಾಮೀಣ ಆಟವನ್ನು ಉತ್ತುಂಗಕ್ಕೆ ಏರಿಸಿದೆ. ತೆರೆಮರೆಯಲ್ಲಿದ್ದ ಕಬಡ್ಡಿ ಆಟಗಾರರ ಭವಿಷ್ಯವನ್ನು ರೂಪಿಸಿಕೊಡುತ್ತಿದೆ. ಕ್ರೀಡಾಳುಗಳ ಬದುಕಿನಲ್ಲಿ ಹೊಸ ಬೆಳಕನ್ನು ಚೆಲ್ಲುತ್ತಿದೆ. ಹೀಗಾಗಿ ಪ್ರೊ ಕಬಡ್ಡಿ ಪಂದ್ಯ ಆಟಗಾರರ ಜೀವನಕ್ಕೆ ಆಸರೆಯಾಗಿ, ವೃತ್ತಿಪರ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Related Articles
1936ರಲ್ಲಿ ನಡೆದ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ಕಬಡ್ಡಿ ಪ್ರದರ್ಶಿಸಿದಾಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಖ್ಯಾತಿ ಪಡೆಯಿತು. 1990ರಲ್ಲಿ ನಡೆದ ಬೀಜಿಂಗ್ ಏಷ್ಯನ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಭಾರತ ಚಿನ್ನದ ಪದಕ ಗಳಿಸಿತ್ತು. ಅಂದಿನಿಂದ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತ ತನ್ನ ಸ್ಥಾನವನ್ನು ಬೇರೆ ದೇಶಗಳಿಗೆ ಬಿಟ್ಟುಕೊಟ್ಟಿಲ್ಲ. ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಕಬಡ್ಡಿ 1995ರಲ್ಲಿ ಮಹಿಳೆಯರ ಕಬಡ್ಡಿ ಆರಂಭವಾಯಿತು. ಅಂದಿನಿಂದ ಶಾಲಾ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಮಹಿಳಾ ಕಬಡ್ಡಿ ತಂಡಗಳು ಭಾಗವಹಿಸುತ್ತಿವೆ. 2012ರಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡ ವಿಶ್ವಕಪ್‌ನಲ್ಲಿ ಇರಾನ್ ಅನ್ನು ಸೋಲಿಸಿತು. ಹೀಗೆ ವಿವಿಧ ಕ್ರೀಡಾಕೂಟಗಳಲ್ಲಿ ಭಾರತದ ಕಬಡ್ಡಿ ತಂಡ ಚಿನ್ನ, ಬೆಳ್ಳಿ ಪದಕವನ್ನು ಪಡೆದು ಜನಪ್ರಿಯತೆಗಳಿಸುತ್ತಿದೆ.
Advertisement
ಯೋಗೀಶ್ ತೀರ್ಥಪುರ