Advertisement

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಹ್ಯಾಟ್ರಿಕ್‌ ಗೆಲುವು; ಮತ್ತೆ ಅಗ್ರಸ್ಥಾನ

10:41 PM Nov 15, 2022 | Team Udayavani |

ಪುಣೆ: ಅಂಕಪಟ್ಟಿಯಲ್ಲಿ ತಳ ಕಂಡಿರುವ ತೆಲುಗು ಟೈಟಾನ್ಸ್‌ ತಂಡವನ್ನು 13ನೇ ಸೋಲಿಗೆ ಗುರಿ ಪಡಿಸಿದ ಬೆಂಗಳೂರು ಬುಲ್ಸ್‌ ಮತ್ತೆ ಅಗ್ರಸ್ಥಾನಕ್ಕೆ ನೆಗೆದಿದೆ. ಮಂಗಳವಾರದ ಮುಖಾಮುಖಿಯನ್ನು ಅದು 49-37 ಅಂತರದಿಂದ ಜಯಿಸಿತು. ಇದು ಬುಲ್ಸ್‌ ಸಾಧಿಸಿದ ಹ್ಯಾಟ್ರಿಕ್‌ ಗೆಲುವು ಕೂಡ ಆಗಿದೆ.

Advertisement

ಬುಲ್ಸ್‌ ಗೆಲುವಿನಲ್ಲಿ ರೈಡರ್‌ಗಳಾದ ಭರತ್‌ ಮತ್ತು ನೀರಜ್‌ ನರ್ವಾಲ್‌ ಭರ್ಜರಿ ಪಾಲು ಸಲ್ಲಿಸಿದರು. ಇವರದು ಕ್ರಮವಾಗಿ 17 ಹಾಗೂ 13 ಅಂಕಗಳ ಸಾಹಸ. ಇದು 14 ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್‌ಗೆ ಒಲಿದ 9ನೇ ಜಯ. ಅದೀಗ 51 ಅಂಕಗಳನ್ನು ಹೊಂದಿದೆ.

ಜೈಪುರಕ್ಕೆ ಸೋತ ಮುಂಬಾ
ಸಮಬಲರ ಸೆಣಸಾಟವಾಗಿದ್ದ ಮಂಗಳವಾರ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 32-22 ಅಂತರದಿಂದ ಯು ಮುಂಬಾವನ್ನು ಮಣಿಸಿತು. ಎರಡೂ ತಂಡಗಳು 13 ಪಂದ್ಯಗಳಲ್ಲಿ 8 ಜಯ, 5 ಸೋಲಿನ ದಾಖಲೆಯೊಂದಿಗೆ ಕಣಕ್ಕಿಳಿದಿದ್ದವು.

ಜೈಪುರ್‌ ಜಯದಲ್ಲಿ ರೈಡರ್‌ ಅರ್ಜುನ್‌ ದೇಶ್ವಾಲ್‌ ಅಮೋಘ ಪಾತ್ರ ವಹಿಸಿದರು. 21 ರೈಡ್‌ ಮೂಲಕ ಸರ್ವಾಧಿಕ 13 ಅಂಕ ಗಳಿಸಿ ಕೊಟ್ಟರು. ಇದರಲ್ಲಿ 12 ಟಚ್‌ ಪಾಯಿಂಟ್‌, ಒಂದು ಬೋನಸ್‌ ಪಾಯಿಂಟ್‌ ಸೇರಿತ್ತು.

ಮುಂಬಾ ವಿರಾಮದ ವೇಳೆಯೇ 11-19ರ ಹಿನ್ನಡೆಗೆ ಸಿಲುಕಿತ್ತು. ದ್ವಿತೀಯಾರ್ಧದಲ್ಲೂ ಜೈಪುರಕ್ಕೆ ಸಡ್ಡು ಹೊಡೆಯಲು ಸಾಧ್ಯವಾಗಲಿಲ್ಲ. ರೈಡರ್‌ಗಳಾದ ಗುಮಾನ್‌ ಸಿಂಗ್‌, ಆಶಿಷ್‌ ತಲಾ 4 ಅಂಕ ಗಳಿಸಿದ್ದೇ ಉತ್ತಮ ಸಾಧನೆಯಾಗಿತ್ತು. ಈ ಜಯದೊಂದಿಗೆ ಜೈಪುರ್‌ ಸ್ವಲ್ಪ ಕಾಲ ದ್ವಿತೀಯ ಸ್ಥಾನ ಅಲಂಕರಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next