ಬೆಂಗಳೂರು: ಪುನೇರಿ ವಿರುದ್ಧದ ಹಿನ್ನಡೆಯನ್ನು ಮೆಟ್ಟಿನಿಂತು ಅಮೋಘ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ರವಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ 40-29 ಅಂತರದ ಗೆಲುವು ಸಾಧಿಸಿದೆ.
ಇದು ಬುಲ್ಸ್ಗೆ ಒಲಿದ 4ನೇ ಜಯ. ಹ್ಯಾಟ್ರಿಕ್ ಸೋಲಿನೊಂದಿಗೆ ಪುನೇರಿ ಕೊನೆಯ ಸ್ಥಾನಕ್ಕೆ ಅಂಟಿಕೊಂಡಿತು.
ವಿರಾಮದ ವೇಳೆ ಪುನೇರಿ 18-13ರ ಮುನ್ನಡೆಯಲ್ಲಿತ್ತು. ಅನಂತರ ಬುಲ್ಸ್ ತಿರುಗಿ ಬಿತ್ತು. ನಾಯಕ ಪವನ್ ಸೆಹ್ರಾವತ್ ಮತ್ತೊಮ್ಮೆ ಕಪ್ತಾನನ ಆಟವಾಡಿ 11 ಅಂಕ ತಂದಿತ್ತರು. ರೈಡರ್ ಚಂದ್ರನ್ ರಂಜಿತ್ 6, ಡಿಫೆಂಡರ್ ಸೌರಭ್ ಮತ್ತು ಅಮಾನ್ 4 ಅಂಕ ಗಳಿಸಿದರು.
ದೈತ್ಯರಿಗೆ ಆಘಾತ: ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ಗೆ ಹರ್ಯಾಣ ಸ್ಟೀಲರ್ಸ್ 38-36 ಅಂತರದಿಂದ ಆಘಾತವಿಕ್ಕಿತು. ಅರ್ಧ ಹಾದಿ ಕ್ರಮಿಸುವ ವೇಳೆ 10-22ರ ಹಿನ್ನಡೆಯಲ್ಲಿದ್ದ ಗುಜರಾತ್ಗೆ ಸೋಲು ಖಚಿತವಾಗಿತ್ತು. ಆದರೆ ವಿರಾಮದ ಬಳಿಕ ಜೈಂಟ್ಸ್ ತಿರುಗಿ ಬಿದ್ದು ಮೇಲುಗೈಯನ್ನೂ ಸಾಧಿಸಿತು. ಕೊನೆಯ ಹಂತದಲ್ಲಿ ಎಡವಿತು. ಜೈಂಟ್ಸ್ ಪರ ರಾಕೇಶ್ 19 ಅಂಕ ಗಳಿಸಿದರು. ಹರ್ಯಾಣ ತಂಡದ ಹೀರೋಗಳೆಂದರೆ ನಾಯಕ ವಿಕಾಸ್ ಕಂಡೋಲ (11) ಮತ್ತು ಆಲ್ರೌಂಡರ್ ಮೀತು (10). ಇವರಲ್ಲಿ ಮೀತು ಪಂದ್ಯದ ತಿರುವಿಗೆ ಕಾರಣರಾದರು. ಇದು ಹರ್ಯಾಣಕ್ಕೆ ಒಲಿದ 2ನೇ ಜಯ.
ಇದನ್ನೂ ಓದಿ:ಮನೆಗೇ ಬೆಂಕಿ ಇಡುವ ಬೆಕ್ಕುಗಳು! ಹುಷಾರಾಗಿರಿ ಎಂದು ಸರ್ಕಾರದಿಂದ ಎಚ್ಚರಿಕೆ