ಪುಣೆ: ಪ್ರೊ ಕಬಡ್ಡಿ ಲೀಗ್‌ಗೆ ಗುರುವಾರ ವಿಶ್ರಾಂತಿಯ ದಿನವಾಗಿದೆ. ಆದರೆ ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ. ಇಲ್ಲಿನ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡವು ಯುಪಿ ಯೋಧಾಸ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ.
ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡವು ಪುನೇರಿ ಪಲ್ಟಾನ್ಸ್ ತಂಡವನ್ನು ಎದುರಿಸಲಿದ್ದರೆ ಮೂರನೇ ಪಂದ್ಯವು ಪಟ್ನಾ ಪೈರೇಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ ನಡುವೆ ನಡೆಯಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಸೋತಿರುವ ಯುಪಿ ತಂಡ ಗೆಲುವಿಗಾಗಿ ಹಾತೊರೆಯುತ್ತಿದೆ.
ಪ್ರದೀಪ್ ನರ್ವಾಳ್ ಪಡೆಯು ಇಷ್ಟರವರೆಗೆ ನಾಲ್ಕು ಪಂದ್ಯಗಳಲ್ಲಿ ಜಯಿಸಿದ್ದರೆ ಐದರಲ್ಲಿ ಸೋತಿದೆ. ತಂಡದ ಪರ ಸುರೇಂದರ್ ಗಿಲ್ ಮತ್ತು ಪ್ರದೀಪ್ ಸ್ಥಿರ ನಿರ್ವಹಣೆ ನೀಡಿದ್ದಾರೆ. ಇದೇ ವೇಳೆ ಹರಿಯಾಣ ತಂಡ ನಾಲ್ಕರಲ್ಲಿ ಜಯಿಸಿದ್ದರೆ ಆರರಲ್ಲಿ ಸೋತಿದೆ. ತಂಡದ ಶ್ರೇಷ್ಠ ರೈಡರ್ ಆಗಿರುವ ಮೀತು ಶರ್ಮ ರೈಡ್‌ನಲ್ಲಿ ಒಟ್ಟಾರೆ 99 ಅಂಕ ಪಡೆದಿದ್ದಾರೆ.
ಉತ್ತಮ ಸ್ಥಿತಿಯಲ್ಲಿ ಯು ಮುಂಬಾ ಯು ಮುಂಬಾ ಇಷ್ಟರವರೆಗೆ ಆರು ಪಂದ್ಯಗಳಲ್ಲಿ ಗೆದ್ದು ಉತ್ತಮ ಸ್ಥಿತಿಯಲ್ಲಿದೆ. ಗುಮಾನ್ ಸಿಂಗ್, ಆಶಿಷ್ ಮತ್ತು ಜೈ ಭಗವಾನ್ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಮುಂಬಾ ತಂಡದ ಎದುರಾಳಿ ಪುನೇರಿ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು ಇಷ್ಟರವರೆಗೆ ಏಳು ಪಂದ್ಯಗಳಲ್ಲಿ ಜಯಿಸಿದೆ. ಅಸ್ಲಾಮ್ ಇನಾಂದರ್ ಮತ್ತು ಮೊಹಿತ್ ಗೋಯತ್ ರೈಡಿಂಗ್‌ನಲ್ಲಿ ಮಿಂಚು ಹರಿಸಿದ್ದಾರೆ. ರಕ್ಷಣೆಯಲ್ಲಿ ಫಜೆಲ್ ಅತ್ರಾಚಲಿ ಉತ್ತಮ ನಿರ್ವಹಣೆ ತೋರಿದ್ದಾರೆ.
ಮುಂಬಾ ಎದುರಾಳಿ ಪುನೇರಿ ಯು ಮುಂಬಾ ಮತ್ತು ಪುನೇರಿ ಇಷ್ಟರವರೆಗೆ 19 ಪಂದ್ಯಗಳಲ್ಲಿ ಆಡಿದ್ದು ಮುಂಬಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಪುನೇರಿ ಎಂಟರಲ್ಲಿ ಜಯಭೇರಿ ಬಾರಿಸಿದೆ. ಎರಡು ಪಂದ್ಯಗಳು ಟೈಗೊಂಡಿವೆ. ದಿನದ ಮೂರನೇ ಪಂದ್ಯದಲ್ಲಿ ಆಡಲಿರುವ ಜೈಪುರ ತಂಡ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಏಳು ಪಂದ್ಯಗಳಲ್ಲಿ ಗೆದ್ದಿರುವ ಜೈಪುರ ನಾಲ್ಕರಲ್ಲಿ ಸೋತಿದೆ. ಪ್ರಮುಖ ರೈಡರ್ ಆಗಿರುವ ಅರ್ಜುನ್ ದೇಶ್ವಾಲ್ 122 ಅಂಕ ಗಳಿಸಿದ್ದಾರೆ. ಪಟ್ನಾ ವಿರುದ್ಧ ಗೆಲುವಿನ ಜೈಪುರ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ.