ಬೆಂಗಳೂರು: ಆರಂಭದಲ್ಲಿ ಹಿನ್ನಡೆ ಅನುಭವಿಸಿ, ಕ್ರಮೇಣ ಬಿರುಸಿನ ಆಟಕ್ಕೆ ಮುಂದಾಗುವ ತನ್ನ ಕಾರ್ಯತಂತ್ರವನ್ನು ಇಲ್ಲಿಯೂ ಯಶಸ್ವಿಗೊಳಿಸಿದ ಬೆಂಗಳುರು ಬುಲ್ಸ್, ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯು ಮುಂಬಾವನ್ನು 42-32 ಅಂತರದಿಂದ ತಿವಿದಿದೆ.
ಆರಂಭದಲ್ಲಿ ಮುಂಬಾ ಬಹಳ ಮುನ್ನಡೆ ಯಲ್ಲಿತ್ತು. ವಿರಾಮದ ವೇಳೆಯಂತೂ ಮುಂಬಾ ಪಡೆಯದ್ದು 24-11 ಅಂಕಗಳ ಭರ್ಜರಿ ಲೀಡ್. ಆದರೆ ಕೋರ್ಟ್ ಬದಲಾದ ಬಳಿಕ ಬುಲ್ಸ್ ಆಟದ ಶೈಲಿಯೇ ಬದಲಾಯಿತು. ಮುಂಬಾ ಹಿನ್ನಡೆ ಕಾಣುತ್ತ ಹೋಯಿತು.
ರೈಡರ್ ಭರತ್ ಅಮೋಘ ಪ್ರದರ್ಶನ ನೀಡಿ ಬುಲ್ಸ್ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಗಳಿಸಿದ ಅಂಕ 16. ಇದರಲ್ಲಿ 14 ಟಚ್ ಪಾಯಿಂಟ್‌ಗಳಾದರೆ, 2 ಬೋನಸ್ ಅಂಕ. ಅವರ ಸೂಪರ್ ರೈಡ್‌ಗಳು ಬುಲ್ಸ್‌ಗೆ ವರವಾಗಿ ಪರಿಣಮಿಸಿತು. ಮತ್ತೋರ್ವ ರೈಡರ್ ವಿಕಾಸ್ ಕಂಡೋಲ ಕೂಡ ಅತ್ಯುತ್ತಮ ಆಟವಾಡಿ 8 ಅಂಕ ಗಳಿಸಿದರು. ಡಿಫೆಂಡರ್ ಸೌರಭ್ ನಂದಲ್ ಗಳಿಕೆ 4 ಅಂಕ.
ಮುಂಬಾ ರೈಡರ್ ಗುಮಾನ್ ಸಿಂಗ್ ಆಟ ಆಕರ್ಷಕವಾಗಿತ್ತು. ಅವರು 11 ಅಂಕ ಗಳಿಸಿ ಕೊಟ್ಟರು. ಡಿಫೆಂಡರ್ ರಾಹುಲ್ ಸತ್ಪಾಲ್ 4 ಅಂಕ ಸಂಪಾದಿಸಿದರು.
ಇದು 6 ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್‌ಗೆ ಒಲಿದ 4ನೇ ಜಯ. ಮುಂಬಾ ಇಷ್ಟೇ ಪಂದ್ಯಗಳಿಂದ 3ನೇ ಸೋಲನುಭವಿಸಿತು.
ಜೈಪುರ್ ವಿಜಯ
ದ್ವಿತೀಯ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ 51-27 ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು. ಜೈಪುರ್ ಪರ ಅರ್ಜುನ್ ದೇಶ್ವಾಲ್ 12 ಅಂಕ ಗಳಿಸಿದರೆ, ಮರಳಿ ಫಾರ್ಮ್ ಕಂಡುಕೊಂಡಂತಿರುವ ರಾಹುಲ್ ಚೌಧರಿ 8 ಅಂಕ ಸಂಪಾದಿಸಿದರು.