ಮುಂಬಯಿ: ಈ ಬಾರಿಯ ಪ್ರೊ ಕಬಡ್ಡಿಯ ಲೀಗ್ ಹಂತದಲ್ಲಿ ಅಮೋಘ ನಿರ್ವಹಣೆ ನೀಡುತ್ತ ಬಂದಿದ್ದ ಬೆಂಗಳೂರು ಬುಲ್ಸ್ ತಂಡದ ಓಟವು ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿದೆ. ಗುರುವಾರ ರಾತ್ರಿ ಮುಂಬಯಿಯಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬುಲ್ಸ್ ತಂಡವನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 49-29 ಅಂಕಗಳಿಂದ ಭರ್ಜರಿಯಾಗಿ ಸೋಲಿಸಿದೆ.
ದಿನದ ಇನ್ನೊಂದು ಸೆಮಿಫೈನಲ್ ಪಂದ್ಯವು ತೀವ್ರ ಪೈಪೋಟಿಯಿಂದ ಸಾಗಿದ್ದು ಪುನೇರಿ ಪಲ್ಟಾನ್ಸ್ ತಂಡವು ತಮಿಳ್ ತಲೈವಾಸ್ ತಂಡವನ್ನು 39-37 ಅಂಕಗಳಿಂದ ರೋಮಾಂಚಕವಾಗಿ ಕೆಡಹಿತು. ಶನಿವಾರ ರಾತ್ರಿ 8.30ಕ್ಕೆ ನಡೆಯುವ ಫೈನಲ್ ಹೋರಾಟದಲ್ಲಿ ಜೈಪುರ ತಂಡವು ಪುನೇರಿ ತಂಡವನ್ನು ಎದುರಿಸಲಿದೆ.
ಬುಲ್ಸ್‌ಗೆ ಭಾರೀ ಸೋಲು:
ಪ್ರೊ ಕಬಡ್ಡಿಯ ಅಭಿಯಾನದಲ್ಲಿ ಆರಂಭದಿಂದಲೂ ಗಟ್ಟಿ ಪ್ರದರ್ಶನ ನೀಡುತ್ತ ಬಂದಿದ್ದ ಬೆಂಗಳೂರು ತಂಡವು ಅನಂತರದ ದಿನಗಳಲ್ಲಿ ಮುಗ್ಗರಿಸಿತ್ತು. ಆದರೂ, ಎಲಿಮಿನೇಟರ್ 1ನಲ್ಲಿ ದಿಲ್ಲಿ ದಬಾಂಗ್ ವಿರುದ್ಧ ಭರ್ಜರಿಯಾಗಿ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ಈಗ ಜೈಪುರದ ವಿರುದ್ಧ 20 ಅಂಕಗಳ ಅಂತರದಲ್ಲಿ ಸೋತಿದೆ.
ಬೆಂಗಳೂರು ಪರ ಭರತ್ 7, ವಿಕಾಸ್ 5, ನೀರಜ್, ಸೌರಭ್ ಅಮನ್ ತಲಾ ನಾಲ್ಕು ಅಂಕ ಗಳಿಸಿದರು. ಜೈಪುರದ ಪರ ಅಜಿತ್ 13, ಸಾಹುಲ್ 10, ಅಂಕ ಗಳಿಸಿ ಗೆಲುವಿಗೆ ನೆರವಾದರು.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಜೈಪುರ ತಂಡವು ಎಲ್ಲಿಯೂ ಬೆಂಗಳೂರಿನ ಕೈ ಮೇಲಾಗಲು ಬಿಡಲಿಲ್ಲ. ಪಂದ್ಯದ 20ನೇ ನಿಮಿಷದಲ್ಲಿ ಜೈಪುರ 25, ಬೆಂಗಳೂರು 15 ಅಂಕ ಗಳಿಸಿದ್ದವು.