Advertisement

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ತಲೆಬಾಗಿದ ತಮಿಳ್‌ ತಲೈವಾಸ್‌

11:05 PM Dec 24, 2021 | Team Udayavani |

ಜೈಪುರ: ಹಾವು-ಏಣಿ ಆಟದಂತೆ ಸಾಗಿದ ಶುಕ್ರವಾರದ ದ್ವಿತೀಯ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ 38-30 ಅಂತರದಿಂದ ತಮಿಳ್‌ ತಲೈವಾಸ್‌ಗೆ ಸೋಲುಣಿಸಿ ಗೆಲುವಿನ ಖಾತೆ ತೆರೆಯಿತು.

Advertisement

ನಾಯಕ ಪವನ್‌ ಸೆಹ್ರಾವತ್‌ (9 ಅಂಕ), ರೈಡರ್‌ ಚಂದ್ರನ್‌ ರಂಜಿತ್‌ (7 ಅಂಕ), ಡಿಫೆಂಡರ್‌ಗಳಾದ ಸೌರಭ್‌ ನಂದಾಲ್‌ ಮತ್ತು ಭರತ್‌ (ತಲಾ 5 ಅಂಕ) ಬುಲ್ಸ್‌ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದರು.

ಎರಡನೇ ಅವಧಿಯ ಒಂದು ಹಂತದಲ್ಲಿ ತಲೈವಾಸ್‌ ತಂಡ ಬೆಂಗಳೂರು ಅಂಕಗಳಿಗೆ ತೀರಾ ಹತ್ತಿರವಾಗಿತ್ತು. ಆದರೆ ಪಂದ್ಯದ ಅಂತಿಮ ನಿಮಿಷಗಳಲ್ಲಿ ಬೆಂಗಳೂರು ತಿರುಗಿಬಿದ್ದು ಪಂದ್ಯವನ್ನು ಹಿಡಿತಕ್ಕೆ ಪಡೆಯಿತು. ಎರಡನೇ ಅವಧಿಯಲ್ಲಿ ಬೆಂಗಳೂರು 19 ಅಂಕ ಗಳಿಸಿದರೆ, ತಲೈವಾಸ್‌ 17 ಅಂಕ ಪಡೆಯಿತು. ಇದು ಪೈಪೋಟಿಯ ತೀವ್ರತೆಯನ್ನು ಸಾರುತ್ತದೆ.

ಸೆಹ್ರಾವತ್‌ 16 ಬಾರಿ ಎದುರಾಳಿಗಳ ಕೋಟೆ ಯೊಳಗೆ ನುಗ್ಗಿ 9 ಅಂಕ ಗಳಿಸಿದರು. ಚಂದ್ರನ್‌ ರಂಜಿತ್‌ 7 ಅಂಕ ಗಳಿಸಿದರು. ತಲೈವಾಸ್‌ ಪರ ಭವಾನಿ ರಜಪೂತ್‌ ಕೇವಲ 12 ದಾಳಿಗಳಲ್ಲಿ 8 ಅಂಕ ಸಂಪಾದಿಸಿದರು. ಆದರೆ ಉಳಿದವರು ದಾಳಿಯಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸಲಿಲ್ಲ.

ದಿಲ್ಲಿಗೆ ಸತತ 2ನೇ ಗೆಲುವು
ಯು ಮುಂಬಾ-ದಬಾಂಗ್‌ ದಿಲ್ಲಿ ನಡುವಿನ ಮೊದಲ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಇಲ್ಲಿ ದಿಲ್ಲಿ 31-27 ಅಂತರದ ಜಯ ಸಾಧಿಸಿತು. ಇದು ದಿಲ್ಲಿಗೆ ಒಲಿದ ಸತತ 2ನೇ ಜಯವಾದರೆ, ಮುಂಬಾಗೆ ಎದುರಾದ ಮೊದಲ ಸೋಲು. ದಿಲ್ಲಿ ಮೊದಲ ಸೆಣಸಾಟದಲ್ಲಿ ಪುನೇರಿ ವಿರುದ್ಧ ಗೆದ್ದು ಬಂದಿತ್ತು.

Advertisement

ಮುಂಬೈ ಪರ ಅಭಿಷೇಕ್‌ ಸಿಂಗ್‌, ವಿ. ಅಜಿತ್‌ ಸಾಮಾನ್ಯ ಪ್ರದರ್ಶನ ನೀಡಿದರು. ಬುಲ್ಸ್‌ ವಿರುದ್ಧ ಗೆಲುವಿನ ರುವಾರಿಯಾಗಿದ್ದ ಯು ಮುಂಬಾದ ಅಭಿಷೇಕ್‌ ಸಿಂಗ್‌ ಇಲ್ಲಿ ಮಿಂಚುವಲ್ಲಿ ವಿಫ‌ಲವಾದರು. ಅನುಭವಿ ಡಿಫೆಂಡರ್‌ ಜೋಗಿಂದರ್‌ ನರ್ವಾಲ್‌ ವಿರುದ್ಧ ಅಭಿಷೇಕ್‌ ಆಟ ನಡೆಯಲಿಲ್ಲ. ಅವರಿಂದ ಬಂದದ್ದು ಬರೀ 5 ಅಂಕ. ಆದರೆ ವಿರಾಮದ ವೇಳೆ 12-10 ಅಂತರದ ಅಲ್ಪ ಮುನ್ನಡೆ ಮುಂಬಾ ತಂಡದ್ದಾಗಿತ್ತು.

ದಿಲ್ಲಿ ದ್ವಿತೀಯಾರ್ಧದಲ್ಲೂ 10-19ರ ಹಿನ್ನಡೆಯಲ್ಲಿತ್ತು. ಅನಂತರದ ತಿರುಗಿ ಬಿದ್ದ ರೀತಿ ಅಮೋಘವಾಗಿತ್ತು. ಫ‌ಜಲ್‌ ಅಟ್ರಾಚಲಿ ಮುಂದಾಳತ್ವದ ಮುಂಬಾ ರಕ್ಷಣಾ ಕೋಟೆಗೆ ಭರ್ಜರಿಯಾಗಿಯೇ ಲಗ್ಗೆ ಇರಿಸಿತು. ರೈಡರ್‌ ನವೀನ್‌ ಕುಮಾರ್‌ ಮತ್ತೂಮ್ಮೆ ಸೂಪರ್‌ ಹೀರೋ ಆಗಿ ಮೂಡಿಬಂದರು. ಜತೆಗೆ ನಾಯಕ ಹಾಗೂ ಡಿಫೆಂಡರ್‌ ಜೋಗಿಂದರ್‌ ನರ್ವಾಲ್‌ ಹೋರಾಟವೂ ಅಮೋಘ ಮಟ್ಟದಲ್ಲಿತ್ತು. ನರ್ವಾಲ್‌ 4 ಅಂಕ ಸಂಪಾದಿಸಿದರು.

ಬೆಂಗಾಲ್‌ಗೆ ಸತತ 2ನೇ ಜಯ
ದಿನದ ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯರ್ ತಂಡ ಗುಜರಾತ್‌ ಜೈಂಟ್ಸ್‌ ತಂಡವನ್ನು 31-28 ಅಂತರದಿಂದ ಮಣಿಸಿ ಸತತ ಎರಡನೇ ಗೆಲುವು ದಾಖಲಿಸಿದೆ.

ನವೀನ್‌ 500 ಅಂಕ
ಗುರುವಾರ ಪುಣೆಯನ್ನು ಮಣಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ನವೀನ್‌ ಕುಮಾರ್‌, ಮುಂಬಾ ವಿರುದ್ಧವೂ ಮಿಂಚಿನಾಟವಾಡಿ 17 ಅಂಕ ತಂದಿತ್ತರು. ಇದರೊಂದಿಗೆ ಅತೀ ಕಡಿಮೆ 47 ಪಂದ್ಯಗಳಿಂದ 500 ರೈಡಿಂಗ್‌ ಅಂಕ ಗಳಿಸಿದ ದಾಖಲೆ ನವೀನ್‌ ಕುಮಾರ್‌ ಅವರದಾಯಿತು. ಹಿಂದಿನ ದಾಖಲೆ ಮಣಿಂದರ್‌ ಸಿಂಗ್‌ ಹೆಸರಲ್ಲಿತ್ತು (56 ಪಂದ್ಯ). ನವೀನ್‌ ಈ ಸಾಧನೆಗೈದ ಅತೀ ಕಿರಿಯ ಆಟಗಾರನೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next