ಸೋನೆಪತ್ (ಹರ್ಯಾಣ): ಪ್ರೊ ಕಬಡ್ಡಿ 6ನೇ ಆವೃತ್ತಿ ಹರ್ಯಾಣ ಚರಣದ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಬಂಗಾಲ್ ವಾರಿಯರ್ 30-25 ಅಂತರದಿಂದ ಗೆಲುವು ಸಾಧಿಸಿದೆ. ಇದು ಒಟ್ಟಾರೆ ಕೂಟದಲ್ಲಿ ಬಂಗಾಲ್ ವಾರಿಯರ್ ಸಾಧಿಸಿದ 2ನೇ ಗೆಲುವು. ಈ ಹಿಂದಿನ ಪಂದ್ಯದಲ್ಲಿ ಬಂಗಾಲ್ ವಾರಿಯರ್ ತಂಡವು 27-36 ಅಂಕದಿಂದ ತಮಿಳ್ ತಲೈವಾಸ್ ವಿರುದ್ಧ ಗೆಲುವು ಸಾಧಿಸಿತ್ತು.
ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ ತಂಡವು ಆತಿಥೇಯ ಹರ್ಯಾಣ ಸ್ಟೀಲರ್ ತಂಡವನ್ನು 36-33 ಅಂಕಗಳಿಂದ ಕೆಡಹಿತು. ಹರ್ಯಾಣದ ನವೀನ್ ರೈಡಿಂಗ್‌ನಲ್ಲಿ ಗರಿಷ್ಠ 15 ಅಂಕ ಗಳಿಸಿದರೂ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಜೈಪುರದ ನಿತಿನ್ ರಾವಲ್ 16 ರೈಡಿಂಗ್‌ನಲ್ಲಿ 8 ಅಂಕ ಸಂಪಾದಿಸಿ ತಂಡದ ಗೆಲುವಿಗೆ ಕೊಡುಗೆ ಸಲ್ಲಿಸಿದರು.
ತೆಲುಗು ಟೈಟಾನ್ಸ್ ತಂಡಕ್ಕೆ ಕೂಟದಲ್ಲಿ ಎದುರಾದ ಮೊದಲ ಸೋಲು. ಟೈಟಾನ್ಸ್ ಚೆನ್ನೈ ಚರಣದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 28-33 ಅಂಕಗಳ ಅಂತರದಿಂದ ಗೆಲುವು ಸಾಧಿಸಿತ್ತು. ಹರ್ಯಾಣ ಚರಣದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ 34-29 ಅಂತರದಿಂದ ಜಯ ಸಾಧಿಸಿತ್ತು. ಆದರೆ ಬಂಗಾಲ್ ವಾರಿಯರ್ ವಿರುದ್ಧ ತೆಲುಗು ಟೈಟಾನ್ಸ್ ಆಟ ನಡೆಯಲಿಲ್ಲ.
ಮಣಿಂದರ್ ಜಾದೂ: ಬಂಗಾಲ್ ವಾರಿಯರ್ ಗೆಲುವಿಗೆ ಪ್ರಮುಖ ಕಾರಣ ಮಣಿಂದರ್ ಸಿಂಗ್ ರೈಡಿಂಗ್. ಮಿಂಚಿನಂತೆ ದಾಳಿ ನಡೆಸಿದ ಅವರು ತೆಲುಗು ಟೈಟಾನ್ಸ್ ಕೋಟೆಯನ್ನು ನುಚ್ಚುನೂರು ಮಾಡಿದರಲ್ಲದೆ ತಂಡಕ್ಕೆ ಅಗತ್ಯವಿದ್ದ ಅತ್ಯಮೂಲ್ಯ 11 ರೈಡಿಂಗ್ ಅಂಕವನ್ನು ತಂದುಕೊಟ್ಟರು. ಅವರ ಒಟ್ಟಾರೆ ರೈಡಿಂಗ್‌ನಲ್ಲಿ 7 ಟಚ್ ಪಾಯಿಂಟ್ ಹಾಗೂ 4 ಬೋನಸ್ ಅಂಕ ಇತ್ತು. ಇವರನ್ನು ಹೊರತುಪಡಿಸಿದಂತೆ ಶ್ರೀಕಾಂತ್ ಟೆವಾಟಿಯ (4 ಅಂಕ), ಮಹೇಶ್ (3 ಅಂಕ) ತಂಡಕ್ಕೆ ನೆರವು ನೀಡಿ ಗೆಲುವಿನ ದಡ ಸೇರಿಸಿದರು.
ನಿಲೇಶ್ ಏಕಾಂಗಿ ಹೋರಾಟ
ರೈಡರ್ ನಿಲೇಶ್ ಸಾಳುಂಕೆ (6 ಅಂಕ) ರೈಡಿಂಗ್‌ನಲ್ಲಿ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಇವರನ್ನು ಹೊರತುಪಡಿಸಿದಂತೆ ವಿಶಾಲ್ ಭಾರಧ್ವಾಜ್ (4 ಅಂಕ), ಅಬೋಜರ್ (5 ಅಂಕ) ಟ್ಯಾಕಲ್‌ನಲ್ಲಿ ಮಿಂಚಿದರೂ ರೈಡಿಂಗ್‌ನಲ್ಲಿ ಒಂದೊಳ್ಳೆ ಆಟ ಹೊರಹೊಮ್ಮದ್ದು ಟೈಟಾನ್ಸ್ ಸೋಲಿಗೆ ಕಾರಣವಾಯಿತು.