Advertisement

ಲಕ್ಷ್ಮಣ್‌ ಬಂದರೂ ಟೈಟಾನ್ಸ್‌ ಗೆಲ್ಲಲಿಲ್ಲ !

12:03 PM Aug 05, 2017 | |

ಹೈದರಾಬಾದ್‌: ತೆಲುಗು ಟೈಟಾನ್ಸ್‌ ಆಟಗಾರರು ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಗೆಲುವಿನ ಬೀಳ್ಕೊಡುಗೆ ನೀಡುವಲ್ಲಿ ಕೊನೆಗೂ ವಿಫ‌ಲರಾಗಿದ್ದಾರೆ. ಗುರುವಾರ ರಾತ್ರಿ ತವರಿನ “ಗಚಿಬೌಲಿ ಸ್ಟೇಡಿಯಂ’ನಲ್ಲಿ ನಡೆದ ತವರಿನ ತನ್ನ 6ನೇ ಹಾಗೂ ಕೊನೆಯ ಪಂದ್ಯದಲ್ಲಿ ಅದು ಪಾಟ್ನಾ ಪೈರೇಟ್ಸ್‌ ವಿರುದ್ಧ 43-36 ಅಂತರದ ಸೋಲುಂಡಿತು. ಇದು ತವರಿನಂಗಳದಲ್ಲಿ ಟೈಟಾನ್ಸ್‌ಗೆ ಎದುರಾದ 5ನೇ ಸೋಲೆಂಬುದು ಆಘಾತಕಾರಿ ಸಂಗತಿ. ಇದಕ್ಕೆ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಕೂಡ ಸಾಕ್ಷಿಯಾದರು.

Advertisement

ಹೈದರಾಬಾದ್‌ನವರೇ ಆದ “ವೆರಿ ವೆರಿ ಸ್ಪೆಷಲ್‌’ ಖ್ಯಾತಿಯ ಲಕ್ಷ್ಮಣ್‌ ತಮ್ಮಿಬ್ಬರು ಮಕ್ಕಳ ಸಮೇತ ಮೊದಲ ಬಾರಿ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಸಹಜ ವಾಗಿಯೇ ತವರಿನ ಟೈಟಾನ್ಸ್‌ ತಂಡಕ್ಕೆ ಬೆಂಬಲ ನೀಡಿದರು. ಟೈಟಾನ್ಸ್‌ ಆಟಗಾರರು ಉತ್ತಮ ಪ್ರದರ್ಶನ ನೀಡಿ ಒಂದೊಂದು ಅಂಕ ಗಳಿಸಿದಾಗಲೂ ಚಪ್ಪಾಳೆ ತಟ್ಟುತ್ತ, ಕೂಗಾಡುತ್ತ ಸಂಭ್ರಮಿಸಿದರು. ಮಕ್ಕಳೂ ಈ ಖುಷಿಯಲ್ಲಿ ಪಾಲ್ಗೊಂಡರು. ಪ್ರೇಕ್ಷಕರೊಂದಿಗೆ ಕೂಡಿ ಹೈದರಾಬಾದ್‌ ಆಟಗಾರರನ್ನು ಹುರಿದುಂಬಿಸತೊಡಗಿದರು. ಆದರೆ ಅಂತಿಮವಾಗಿ ಎದುರಾದದ್ದು ಸೋಲಿನ ಫ‌ಲಿತಾಂಶ. ಇದನ್ನೂ ಲಕ್ಷ್ಮಣ್‌ ಕ್ರೀಡಾಸ್ಫೂರ್ತಿಯಿಂದಲೇ ಸ್ವೀಕರಿಸಿದರು.

ಲಕ್ಷ್ಮಣ್‌ ಈ ಬಾರಿ ಕಬಡ್ಡಿ ವೀಕ್ಷಣೆಗೆ ಆಗಮಿಸಿದ ಮೊದಲ ಕ್ರಿಕೆಟಿಗನೇನಲ್ಲ. ವಾರದ ಹಿಂದೆ ಅವರ ಬಹು ಕಾಲದ ಒಡನಾಡಿ, ಸಹ ಆಟಗಾರ ಸಚಿನ್‌ ತೆಂಡುಲ್ಕರ್‌ ಕೂಡ ಬಂದಿದ್ದರು. ಸಚಿನ್‌ ತಮಿಳ್‌ ತಲೈವಾಸ್‌ ತಂಡದ ಸಹ ಮಾಲಕನೂ ಆಗಿದ್ದಾರೆ. ಸ್ವಾರಸ್ಯವೆಂದರೆ, ಈ ಬಾರಿಯ ಕಬಡ್ಡಿ ಮೇಲಾಟದಲ್ಲಿ ತೆಲುಗು ಟೈಟಾನ್ಸ್‌ನ ಏಕೈಕ ಗೆಲುವು ದಾಖಲಾದದ್ದೇ ತಮಿಳ್‌ ತಲೈವಾಸ್‌ ವಿರುದ್ಧ. ಅಂದು ರಾಹುಲ್‌ ಚೌಧರಿ ಟಾಪ್‌-ಫಾರ್ಮ್ನಲ್ಲಿದ್ದು, “ಸೂಪರ್‌-10′ ಗಳಿಕೆಯೊಂದಿಗೆ ತಂಡದ 32-27 ಅಂತರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.  ಅಂದಹಾಗೆ ಅದು ಕೂಟದ ಉದ್ಘಾಟನಾ ಪಂದ್ಯ ವಾಗಿತ್ತು. ತನ್ನ ತಂಡದ ಸೋಲಿಗೆ ಸಚಿನ್‌ ಸಾಕ್ಷಿಯಾಗ ಬೇಕಾಯಿತು!

Advertisement

Udayavani is now on Telegram. Click here to join our channel and stay updated with the latest news.

Next