Advertisement

ಅಜಯ್‌ ಠಾಕೂರ್‌ ಆಟಕ್ಕೆ ಒಲಿದ ಜಯ

07:20 AM Sep 14, 2017 | Team Udayavani |

ಸೋನೆಪತ್‌ (ಹರ್ಯಾಣ): ಅಜಯ್‌ ಠಾಕೂರ್‌ (8 ಅಂಕ) ಸೂಪರ್‌ ರೈಡಿಂಗ್‌ನಿಂದಾಗಿ ತಮಿಳ್‌ ತಲೈವಾಸ್‌ 34-33 ಅಂತರದಿಂದ ಯುಪಿ ಯೋಧಾ ವಿರುದ್ಧ ರೋಚಕ ಗೆಲುವು ಸಾಧಿಸಿತು. ಸತತ ಮೂರು ಸೋಲುಗಳ ನಂತರ ತಮಿಳ್‌ ತಲೈವಾಸ್‌ ಗೆಲುವು ಸಾಧಿಸಿದೆ. ಅಲ್ಲದೆ ಕೂಟದಲ್ಲಿ ತಲೈವಾಸ್‌ಗೆ ಇದು ಒಟ್ಟಾರೆ 2ನೇ ಗೆಲುವಾಗಿದೆ.

Advertisement

ಇದಕ್ಕೂ ಮೊದಲು ಮೋತಿಲಾಲ್‌ ಸ್ಕೂಲ್‌ ನೆಹರೂ ಸ್ಕೂಲ್‌ ಆಫ್ ನ್ಪೋರ್ಟ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಮೊದಲ ಅವಧಿ ಆಟದಲ್ಲಿ ಯುಪಿ ಪಾರಮ್ಯ ಮೆರೆಯಿತು. ಪಂದ್ಯ ಆರಂಭವಾದ 4 ನಿಮಿಷಕ್ಕೆ ತಲೈವಾಸ್‌ ತಂಡವನ್ನು ಆಲೌಟ್‌ ಮಾಡಿತು. ನಿತಿನ್‌ ತೋಮರ್‌ (14 ಅಂಕ) ಯುಪಿ ಪರ ಮಿಂಚಿನ ದಾಳಿ ನಡೆಸಿದರು. ಆದರೆ ಇದಕ್ಕೆಲ್ಲದ್ದಕ್ಕೂ 2ನೇ ಅವಧಿಯಲ್ಲಿ ತಲೈವಾಸ್‌ ಉತ್ತರ ನೀಡಿ ಬೀಗಿತು.

ಅಜಯ್‌ ನೀಡಿದ ತಿರುವು:
ಕೊನೆಯಲ್ಲಿ ಗೆಲ್ಲಲು ತಲೈವಾಸ್‌ಗೆ 2 ಅಂಕದ ಅವಶ್ಯಕತೆ ಇತ್ತು. ಡ್ರಾ ಸಾಧಿಸಲು 1 ಅಂಕ ಬೇಕಾಗಿತ್ತು. ಹೀಗೆ 33-32ರಿಂದ ಮುನ್ನಡೆಯಲ್ಲಿದ್ದ ಯುಪಿಗೆ ಆಘಾತ ನೀಡಿದ್ದು ಅಜಯ್‌ ಠಾಕೂರ್‌ ಅಂತಿಮ ರೈಡ್‌. ಅವರು ಪಂದ್ಯ ಮುಗಿಯಲು ಇನ್ನೇನು 1 ನಿಮಿಷ ಇದ್ದಾಗ ಯುಪಿ ತಂಡದ ಮೂವರನ್ನು ಸೂಪರ್‌ ರೈಡಿಂಗ್‌ ಮೂಲಕ ಔಟ್‌ ಮಾಡಿದರು. ಇದರೊಂದಿಗೆ ತಂಡದ ಗೆಲುವನ್ನು ನಾಯಕ ಖಾತ್ರಿಪಡಿಸಿದರು. ಕೊನೆಗೆ ಯೋಧಾ ಗೆಲುವಿಗೆ ರಿಷಾಂಕ್‌ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.

1ನೇ ಅವಧಿಯಲ್ಲಿ ತಲೈವಾಸ್‌ ಪುಡಿಗಟ್ಟಿದ್ದ ಯುಪಿ:
ಪಂದ್ಯದ ಮೊದಲ ಅವಧಿ ಆರಂಭವಾಗಿ 4 ನಿಮಿಷದಲ್ಲೇ ತಮಿಳ್‌ ತಲೈವಾ ಮೊದಲ ಬಾರಿಗೆ ಆಲೌಟಾಯಿತು. ಈ ಹಂತದಲ್ಲಿ ಅಜಯ್‌ ಠಾಕೂರ್‌ ಎದುರಾಳಿ ರಕ್ಷಣಾವ್ಯೂಹವನ್ನು ಭೇದಿಸುವ ಪ್ರಯತ್ನ ನಡೆಸಿದರು. ಆದರೆ ಇದು ಸಾಧ್ಯವಾಗಲಿಲ್ಲ. ಆದರೆ ಪರಪಂಚನ್‌ ಸೂಪರ್‌ ರೈಡಿಂಗ್‌ ಮೂಲಕ 3 ಅಂಕವನ್ನು ತಂದು ಅಂತರವನ್ನು 8-13ಕ್ಕೆ ತಗ್ಗಿಸಿದರು. ಆದರೆ ಯೋಧಾ ಪರವಾಗಿ ನಿತಿನ್‌ ತೋಮರ್‌ ಮಿಂಚಿನ ರೈಡಿಂಗ್‌ ನಡೆಸಿ ತಮಿಳ್‌ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಬಳಿಕ ಎಚ್ಚೆತ್ತ ತಲೈವಾ ಮೊದಲ ಅವಧಿ ಮುಕ್ತಾಯಕ್ಕೆ ಅಂಕಗಳಿಕೆಯನ್ನು 12-18 ಅಂತರಕ್ಕೆ ಕಡಿಮೆ ಮಾಡಿಕೊಂಡಿತು. ಈ ಅವಧಿಯಲ್ಲಿ ತಮಿಳ್‌ ಪರ ಮಿಂಚಿದ್ದು ಪರಪಂಚನ್‌. ಇವರ ದಾಳಿಯಿಂದ ಯೋಧಾ ಮೊದಲ ಅವಧಿ ಮುಕ್ತಾಯಕ್ಕೆ ಆಲೌಟ್‌ ಭೀತಿಗೆ ಸಿಲುಕಿಕೊಂಡಿತು.

2ನೇ ಅವಧಿಯಲ್ಲಿ ತಲೈವಾಸ್‌ ಚುರುಕಿನ ಆಟ:
2ನೇ ಅವಧಿಯ ಆರಂಭದಲ್ಲಿ ಯುಪಿಯನ್ನು ತಲೈವಾಸ್‌ ಆಲೌಟ್‌ ಮಾಡಿತು. ಅಂಕಗಳಿಕೆಯಲ್ಲಿ ಯುಪಿ 20-16 ರಿಂದ ಮುಂದಿತ್ತು. ಹೀಗಿದ್ದರೂ ತಲೈವಾಸ್‌ 4 ಅಂಕಗಳ ಹಿನ್ನಡೆ ಅನುಭವಿಸಿತು. ಇನ್ನೇನು ಆಟ ಮುಗಿಯಲು 9 ನಿಮಿಷ ಬಾಕಿ ಇರುವಾಗ ತಲೈವಾಸ್‌ ಅಂಕಗಳ ಅಂತರವನ್ನು 20-23ಕ್ಕೆ ಇಳಿಸಿಕೊಂಡಿತು.  3 ಅಂಕದ ಅಂತರ ಕೊನೆಯ 5 ನಿಮಿಷದವರೆಗೆ ಸಾಗಿತ್ತು. ಪಂದ್ಯ ಮುಗಿಯಲು 3 ನಿಮಿಷ ಇದ್ದಾಗ ಯುಪಿ 2ನೇ ಸಲ ಆಲೌಟಾಯಿತು. ಈ ವೇಳೆ ತಲೈವಾಸ್‌ 29-28 ಅಂಕಗಳ ಅಂತರದ ಮುನ್ನಡೆ ಕಾಯ್ದುಕೊಂಡು ಗೆಲುವಿನ ಮುನ್ಸೂಚನೆ ನೀಡಿತು. 

Advertisement

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next