Advertisement
ಇಲ್ಲಿನ ನೇತಾಜಿ ಸುಭಾಶ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಮೊಳಗಿದ್ದು ಪ್ರದೀಪ್ ನರ್ವಾಲ್ ರಣಕಹಳೆ! ಒಟ್ಟು 21 ರೈಡಿಂಗ್ ಪಾಯಿಂಟ್ ತಂದು ಅಕ್ಷರಶಃ ಒನ್‌ಸೈಡೆಡ್ ಪಂದ್ಯವಾಗಿಸಿಬಿಟ್ಟರು ನರ್ವಾಲ್. ನಾಯಕ ಜಸ್ವೀರ್ ಸಿಂಗ್ ಇಲ್ಲದ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ಪಾಟಾದನ ಸಾರಥಿ ಪ್ರದೀಪ್ ನರ್ವಾಲ್ ಆಡಿದ್ದೇ ಆಟ ಆಗಿತ್ತು. ಒಂದೇ ಗಾಳದಲ್ಲಿ ಮೂರ್ನಾಲ್ಕು ಮೀನುಗಳು ಬೀಳುವ ಹಾಗಿದ್ದ ಪ್ರದೀಪ್‌ರ ಸೂಪರ್ ರೈಡಿಂಗ್‌ನಿಂದ ಜೈಪುರ ಪಿಂಕ್ ಪ್ಯಾಂಥರ್ 4 ಬಾರಿ ಆಲೌಟ್ ಆಯಿತು!
ಆರಂಭದ 7ನೇ ನಿಮಿಷದಲ್ಲೇ ಪಾಟ್ನಾ ಕಪ್ತಾನ ಪ್ರದೀಪ್ 100ನೇ ರೈಡಿಂಗ್ ಪಾಯಿಂಟ್ ಕಂಡು, ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ “ಶತಕ ತಾರೆ’ಯಾಗಿ ದಾಖಲೆ ಬರೆದರು. 8ನೇ ನಿಮಿಷದಲ್ಲೇ ಗೂಡು ಖಾಲಿ ಮಾಡಿಕೊಂಡ ಜೈಪುರ 11-2ರಿಂದ ಆರಂಭಿಕ ಹಿನ್ನಡೆ ಕಂಡು ಮತ್ತೆ ಎದ್ದೇಳಲಿಲ್ಲ. ಮೊದಲಾರ್ಧ ಮುಗಿದಾಗ 19-9 ಅಂಕಗಳ ಮುನ್ನಡೆಯಲ್ಲೇ ಪಾಟ್ನಾ ಗೆಲುವಿನ ಮುನ್ಸೂಚನೆ ನೀಡಿತ್ತು. 7ನೇ ನಿಮಿಷದ ನರ್ವಾಲ್‌ರ 4 ಸೂಪರ್ ರೈಡಿಂಗ್ ಅಂಕ, 29ನೇ ನಿಮಿಷದ 5 ಪಾಯಿಂಟ್‌ಗಳು ಪ್ರದೀಪ್‌ರ ಪರಾಕ್ರಮಕ್ಕೆ ಸಾಕ್ಷಿ ಆಗಿದ್ದವು. ದುಬಾರಿಯಾದ ಆಲೌಟ್
ಜೈಪುರವನ್ನು ಮುಗ್ಗರಿಸಿ ಬೀಳುವಂತೆ ಮಾಡಿದ್ದೇ ಆಲ್‌ಔಟ್ ಪಾಯಿಂಟ್‌ಗಳು. ಜತೆಗೆ ನರ್ವಾಲ್ ಸೂಪರ್ ರೈಡಿಂಗ್ ಅಂಕಗಳು. 8, 22, 31, 38ನೇ ನಿಮಿಷದಲ್ಲಿ ಆಲೌಟ್ ಆದ ಪರಿಣಾಮ, ಪಾಟ್ನಾಗೆ ಮೊಗೆ ಮೊಗೆದು ಅಂಕಗಳನ್ನು ಕೊಟ್ಟಿತು ಜೈಪುರ.
Related Articles
ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ನ ಉಕ್ಕಿನ ದಾಳಿಗೆ ಬೆಂಗಾಲ್ ವಾರಿಯರ್ಸ್ 29-36 ಅಂಕಗಳಿಂದ ಸೋಲನ್ನಪ್ಪಿತು. ಸ್ಟೀಲರ್ಸ್‌ನ ವಾಜಿರ್ ಸಿಂಗ್ 23ನೇ ನಿಮಿಷದಲ್ಲಿ ತಂದ 4 ಸೂಪರ್ ರೈಡಿಂಗ್ ಪಾಯಿಂಟ್ ಗಳು, ಅದರ ಬೆನ್ನಲ್ಲೇ ಆದ ಆಲೌಟ್ ಬೆಂಗಾಲಿ ಹುಲಿಗಳಿಗೆ ದುಬಾರಿ ಆಯಿತು. ಪಂದ್ಯ ಮುಗಿಯಲು 5 ನಿಮಿಷ ಇರುವಾಗ ಬಂಗಾಲಿ ಪಡೆ ಅಮೋಘ ಹೋರಾಟ ನೀಡಿತ್ತಾದರೂ, ಅದು ಪ್ರಯೋಜನಕ್ಕೆ ಬರಲಿಲ್ಲ. ಸ್ಟೀಲರ್ಸ್ ಪರ ವಾಜಿರ್ ಸಿಂಗ್ “ಸೂಪರ್ 10′ ಅಂಕಗಳಿಂದ ಮಿಂಚಿದರು.
Advertisement
ಕೀರ್ತಿ ಕೋಲ್ಗಾರ್