ರಾಂಚಿ: ಕಳೆದ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ತೋರಿದ್ದ ಶೌರ್ಯಕ್ಕೆ ಈ ಬಾರಿ ಸಿಡಿಲು ಬಡಿದಂತ ಪರಿಸ್ಥಿತಿ. ಈ ಹಿಂದಿನ ನಾಲ್ಕೂ ಆವೃತ್ತಿಗಳನ್ನು ಪರಿಗಣಿಸಿದರೆ 5ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ತೆಲುಗು ಟೈಟಾನ್ಸ್ ತಂಡದ್ದು ಅತ್ಯಂತ ಕಳಪೆ ಪ್ರದರ್ಶನ. ರಾಂಚಿ ಚರಣದ ಮೊದಲನೇ ದಿನದಲ್ಲೂ ತೆಲುಗು ತನ್ನ ದುಸ್ಥಿತಿಯನ್ನು ತೆರೆದಿಟ್ಟಿತು. ಪಾಟ್ನಾದ ವಿರುದ್ಧ ಬರೀ ತೊಡೆ ತಟ್ಟಿ ಸದ್ದು ಮಾಡೀತೆ ವಿನಃ ಅದನ್ನು ಅಂಕಗಳನ್ನಾಗಿ ಪರಿವರ್ತಿಸಲಿಲ್ಲ. ಪರಿಣಾಮ ಪಾಟ್ನಾ ಪೈರೇಟ್ಸ್ ವಿರುದ್ಧ 30-46 ಅಂಕಗಳಿಂದ ಮಂಡಿಯೂರಿತು.
ರಾಂಚಿ ಚರಣದ ಮೊದಲನೇ ದಿನದ ಮೊದಲರ್ಧದಲ್ಲೇ ಪಂದ್ಯದ ಫಲಿತಾಂಶ ಏನಾಗಬಹುದೆಂದು ನಿರ್ಧಾರವಾಗಿತ್ತು. ಕೇವಲ 5ನೇ ನಿಮಿಷದಲ್ಲಿ ತೆಲುಗು ಮೊದಲ ಬಾರಿ ಆಲೌಟ್. ಆಗಿನ ಅಂಕ ಪಾಟ್ನಾ 6, ತೆಲುಗು 2. ಪಂದ್ಯದ ಫಲಿತಾಂಶದ ಅಂದಾಜು ಇಲ್ಲೇ ಸಿಕ್ಕಿದ್ದರೂ ಮುಂದಿನ ಕೆಲವೇ ನಿಮಿಷದಲ್ಲಿ ಅಚ್ಚರಿಯೆಂಬಂತೆ ಪಾಟ್ನಾ ಪೈರೇಟ್ಸ್ ಆಲೌಟಾಯಿತು. ಆಗ ತೆಲುಗು ಅಭಿಮಾನಿಗಳು ಸಂಭ್ರಮಿಸಿದರು. ತಂಡ ಗೆದ್ದರೂ ಗೆಲ್ಲಬಹುದೆಂಬ ಭರವಸೆ ಹೊಂದಿದರು. ನಂತರ ಆಗಿದ್ದೇ ಬೇರೆ.
ಮುಂದೆ ತೆಲುಗು ಟೈಟಾನ್ಸ್ ಮತ್ತೆ 3 ಬಾರಿ ಆಲೌಟಾಗಿ ಪೂರ್ಣವಾಗಿ ಮಂಡಿಯೂರಿತು. ಮತ್ತೂಂದು ಕಡೆ ಪಾಟ್ನಾದ ದಾಳಿಗಾರರು ತಮ್ಮ ಅಬ್ಬರವನ್ನು ಮುಂದುವರಿಸಿ ತೆಲುಗು ಕೋಟೆಯನ್ನು ಧೂಳೀಪಟವೆಬ್ಬಿಸಿದರು.
ಪಾಟ್ನಾದ ನಾಯಕ ಪ್ರದೀಪ್ ನರ್ವಾಲ್ ಆಕ್ರಮಣಕಾರಿ, ಪ್ರಬಲ ದಾಳಿ ಇಲ್ಲೂ ಮುಂದುವರಿಯಿತು. ಅವರು ತೆಲುಗು ಅಂಕಣದ ಮೇಲೆ ಒಟ್ಟು 24 ಬಾರಿ ದಾಂಗುಡಿಯಿಟ್ಟು 14 ಅಂಕಗಳನ್ನು ಗಳಿಸಿದರು. ಅದಕ್ಕೆ ಸರಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಅವರಿಗೆ ಒಲಿದು ಬಂತು. ನರ್ವಾಲ್‌ಗೆ ಹೋಲಿಸಿದರೆ ಅವರಿಗೆ ಸರಿಸಮನಾಗಬಲ್ಲ ಪ್ರಬಲ ದಾಳಿಗಾರರು ತೆಲುಗು ಪಡೆಯಲ್ಲಿ ಕಾಣಿಸಲಿಲ್ಲ. ತೆಲುಗಿನ ತಾರಾ ಆಟಗಾರ ರಾಹುಲ್ ಚೌಧರಿ ಮತ್ತೂಮ್ಮೆ ಶೋಚನೀಯ ಪ್ರದರ್ಶನ ತೋರಿದರು. ಆದರೂ ಈ ತಂಡದ ಉಳಿದ ದಾಳಿಗಾರರನ್ನು ಪರಿಗಣಿಸಿದರೆ ಇವರದ್ದೇ ಉತ್ತಮ ಎನ್ನಬಹುದಾದ ದುಸ್ಥಿತಿ. ಅವರು ಒಟ್ಟು 16 ಬಾರಿ ಎದುರಾಳಿ ಅಂಕಣಕ್ಕೆ ನುಗ್ಗಿ 7 ಅಂಕ ಗಳಿಸಿದರು. ರಕ್ಷಣಾ ವಿಭಾಗದಲ್ಲೂ ತೆಲುಗು ಎಡವಿತು. ಪಾಟ್ನಾದ ದಾಳಿಯನ್ನು ತಡೆಯಲು ಪೂರ್ಣ ವಿಫಲವಾಗಿ ಹತಾಶೆ ಅನುಭವಿಸಿತು.
ಈ ಪಂದ್ಯದ ಆರಂಭದಲ್ಲಿ ಪಾಟ್ನಾ ಬಿ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿತ್ತು. ಪಂದ್ಯ ಮುಗಿದ ಬಳಿಕ ಅದರ ಸ್ಥಾನ 2ಕ್ಕೇರಿತು. ಈ ಹಂತದಲ್ಲಿ ಅದು ಒಟ್ಟು 12 ಪಂದ್ಯವಾಡಿ 6 ಗೆಲುವು, 3 ಸೋಲು, 3 ಟೈಗಳೊಂದಿಗೆ 41 ಅಂಕಗಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಾಟ್ನಾದ ಅಬ್ಬರ 3ನೇ ಪ್ರೊ ಕಬಡ್ಡಿ ಕಿರೀಟ ಗೆಲ್ಲುವ ಸ್ಪಷ್ಟ ಸೂಚನೆಯಾಗಿ ಕಾಣುತ್ತಿದೆ. ಮತ್ತೂಂದು ಕಡೆ ತೆಲುಗು ಟೈಟಾನ್ಸ್ ತಂಡ ಒಟ್ಟು 14 ಪಂದ್ಯವಾಡಿ ಕೇವಲ 4 ಜಯ, 11 ಸೋಲುಗಳೊಂದಿಗೆ 30 ಅಂಕಕ್ಕೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಈ ತಂಡ ಸುಧಾರಿಸಿಕೊಂಡು ಮೇಲೇರಬಹುದೇ ಎನ್ನುವುದು ಸದ್ಯದ ಪ್ರಶ್ನೆ.
– ಕೆ.ಪೃಥ್ವಿಜಿತ್