Advertisement
ಇಲ್ಲಿನ ಜವಹರ್‌ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಹೋರಾಟದ ಆರಂಭದಲ್ಲಿ ಎರಡೂ ತಂಡಗಳು ಸಮಬಲದ ಕಾದಾಟ ನಡೆಸಿದವು. ಆದರೆ ವಿಕಾಸ್ ಖಂಡೋಲ, ವಜೀರ್ ಸಿಂಗ್ ಮತ್ತು ದೀಪಕ್ ಕುಮಾರ್ ದಹಿಯ ಅವರ ಭರ್ಜರಿ ಆಟದಿಂದಾಗಿ ಹರಿಯಾಣ ಮೇಲುಗೈ ಸಾಧಿಸಿತು. 2 ಬಾರಿ ಮುಂಬಾ ಆಲೌಟ್‌ಗೆ ಗುರಿಯಾದ ಕಾರಣ ಸೋಲು ಕಾಣುಂತಾಯಿತು. ಈ ಗೆಲುವಿನಿಂದ ಹರಿಯಾಣ ತಾನಾಡಿದ ಒಟ್ಟು 19 ಪಂದ್ಯಗಳಿಂದ 10ನೇ ಗೆಲುವು ದಾಖಲಿಸಿ 64 ಅಂಕ ಪಡೆದು ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಸೋತ ಮುಂಬಾಗೂ ಮುನ್ನಡೆಯುವ ಅವಕಾಶವಿದೆ. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಅದು ಗೆಲ್ಲಬೇಕಾದ ಅನಿವಾರ್ಯತೆಯಿದೆ.
ಮುಂಬಾ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಿದ ನಾಯಕ ಅನೂಪ್ ಕುಮಾರ್ 10 ಅಂಕ ಪಡೆದರೆ, ಶ್ರೀಕಾಂತ್ ಜಾಧವ್ 5 ಅಂಕ, ಅಡಕೆ ಮತ್ತು ಶಬ್ಬೀರ್ 3 ಮೂರು ಅಂಕ ಗಳಿಸಿದರು. ಹರಿಯಾಣ ಮುನ್ನಡೆ
ಮೊದಲ ನಿಮಿಷದಲ್ಲಿಯೇ ಅನೂಪ್ ಅವರನ್ನು ಹಿಡಿದು ಹರಿಯಾಣ ಮುನ್ನಡೆ ಸಾಧಿಸಿದರೂ 4ನೇ ನಿಮಿಷದಲ್ಲಿ ಮುಂಬಾ 3-3ರಿಂದ ಸಮಬಲ ಸಾಧಿಸಲು ಯಶಸ್ವಿಯಾಯಿತು. ಆಬಳಿಕ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಮೊದಲ 10 ನಿಮಿಷದ ಆಟ ಮುಗಿದಾಗ 8-6ರಿಂದ ಹರಿಯಾಣ ಮುನ್ನಡೆಯಲ್ಲಿತ್ತು.
Related Articles
Advertisement
ದ್ವಿತೀಯ ಅವಧಿ ಆರಂಭವಾಗಿ 8ನೇ ನಿಮಿಷದಲ್ಲಿ ವಿಕಾಸ್ ಸ್ನಾಯು ಸೆಳೆತಕ್ಕೆ ಒಳಗಾಗಿ ಅಂಗಣದಿಂದ ಹೊರನಡೆದರು. ಅವರು ಮತ್ತೆ ಅಂಗಣಕ್ಕೆ ಇಳಿಯಲಿಲ್ಲ. ಆಬಳಿಕ ದೀಪಕ್ ಮತ್ತು ವಝೀರ್ ಭರ್ಜರಿ ಆಟವಾಡಿದ್ದರಿಂದ ಹರಿಯಾಣದ ಮುನ್ನಡೆ ಏರತೊಡಗಿತು. ಪಂದ್ಯ ಮುಗಿಯಲು 5 ನಿಮಿಷವಿರುವಾಗ ಮುಂಬಾ ಎರಡನೇ ಬಾರಿ ಆಲೌಟಾಯಿತು. ಅಂತಿಮವಾಗಿ 30-41ರಿಂದ ಹರಿಯಾಣಕ್ಕೆ ಶರಣಾಯಿತು.
– ಶಂಕರನಾರಾಯಣ.ಪಿ