ಜೈಪುರ: ಪ್ರೊ ಕಬಡ್ಡಿ ಲೀಗ್ ಐದರ ಜೈಪುರ ಚರಣದ ಅಂತರ್ ವಲಯ ಪಂದ್ಯದಲ್ಲಿ ಎ ವಲಯದ ಹರಿಯಾಣ ಸ್ಟೀಲರ್ ತಂಡವು ಬಿ ವಲಯದ ತೆಲುಗು ಟೈಟಾನ್ಸ್ ತಂಡವನ್ನು 32-30 ಅಂಕಗಳಿಂದ ರೋಮಾಂಚಕವಾಗಿ ಸೋಲಿಸಿತು.
ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಝೀರ್ ಸಿಂಗ್ ಭರ್ಜರಿ ಆಟ ಪ್ರದರ್ಶಿಸಿದರು. ವಝೀರ್ ಮತ್ತು ಸುರ್ಜೀತ್ ಅವರ ರೈಡ್‌ಗಳಿಂದ ಹರಿಯಾಣ ಅಂಕ ಪೇರಿಸತೊಡಗಿತು. ದ್ವಿತೀಯ ಅವಧಿಯಲ್ಲಿ ತೆಲುಗು ಉಗ್ರವಾಗಿ ಹೋರಾಡಿದ್ದರಿಂದ ಪಂದ್ಯ ತೀವ್ರ ಕುತೂಹಲ ಪಡೆಯಿತು.ಅಂತಿಮವಾಗಿ ಹರಿಯಾಣ 2 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿತು. ವಝೀರ್ ಸಿಂಗ್ 14 ಅಂಕ ಗಳಿಸಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರೆ ಸುರ್ಜೀತ್ 4 ಅಂಕ ಗಳಿಸಿದರು.
ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ ತೆಲುಗು ಟೈಟಾನ್ಸ್‌ನ ರಾಹುಲ್ ಚೌಧರಿ 11 ಅಂಕ ಗಳಿಸಿದರೆ ನೀಲೇಶ್ ಸಾಲುಂಕೆ 10 ಅಂಕ ಪಡೆದರು.ಸೋತ ತೆಲುಗು ಟೈಟಾನ್ಸ್ ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗುವುದು ಬಹಳ ಕಷ್ಟವಾಗಿದೆ. ತೆಲುಗು ಇನ್ನು ಲೀಗ್‌ನಲ್ಲಿ ಒಂದೇ ಪಂದ್ಯ ಆಡಬೇಕಾಗಿದೆ. ಆಡಿದ 21 ಪಂದ್ಯಗಳಲ್ಲಿ ಅದು 49 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ರೋಚಕ ಜಯ ಸಾಧಿಸಿದ ಹರಿಯಾಣ ಸ್ಟೀಲರ್ ತಾನಾಡಿದ 20 ಪಂದ್ಯಗಳಿಂದ 11ರಲ್ಲಿ ಜಯ ಸಾಧಿಸಿ 69 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಗುಜರಾತ್ ಅಗ್ರಸ್ಥಾನದಲ್ಲಿದೆ.
ಜೈಪುರಕ್ಕೆ 36-32 ಗೆಲುವು
ದಿನದ ಎರಡನೇ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ ತಂಡವು ಯು ಮುಂಬಾ ತಂಡವನ್ನು 36-32 ಅಂಕಗಳಿಂದ ಸೋಲಿಸಲು ಯಶಸ್ವಿಯಾಗಿದೆ. ಜಸ್ವೀರ್ ಸಿಂಗ್ 9 ಅಂಕ ಗಳಿಸಿ ಗೆಮನ ಸೆಳೆದರು.