Advertisement

ಬಿಜೆಪಿ ಪರ “ಪ್ರೋ ಇಂಕಬೆನ್ಸಿ’ವಾತಾವರಣ

12:24 AM Apr 10, 2019 | Team Udayavani |

ಬೆಂಗಳೂರು: ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಕೇಂದ್ರ ಸರ್ಕಾರದ ಜನಪರ ಆಡಳಿತದಿಂದ “ಪ್ರೋ ಇಂಕಬೆನ್ಸಿ’ ವಾತಾವರಣವಿದೆ. ಜತೆಗೆ ಮೋದಿ ಅಲೆಯೂ ಜೋರಾಗಿದ್ದು, ರಾಜ್ಯದಲ್ಲಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತೆಲಂಗಾಣ ರಾಜ್ಯ ಉಸ್ತುವಾರಿಯೂ ಆಗಿರುವ ಅರವಿಂದ ಲಿಂಬಾವಳಿ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಪಕ್ಷ ಸಂಘಟನೆ, ಚುನಾವಣೆ ತಯಾರಿ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ, ವಂಶಾಡಳಿತ, ಮೈತ್ರಿ ಸರ್ಕಾರದ ವೈಫ‌ಲ್ಯ, ಬಿಜೆಪಿ ಸ್ಥಿತಿಗತಿ ಬಗ್ಗೆ ನೀಡಿರುವ ಸಂದರ್ಶನ ಇಲ್ಲಿದೆ.

* ಲೋಕಸಭಾ ಚುನಾವಣೆ ಹೊಸ್ತಿನಲ್ಲಿ ರಾಜ್ಯದ ರಾಜಕೀಯ ವಾತಾವರಣ ಹೇಗಿದೆ?
ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಜನಪರ ಆಡಳಿತದಿಂದ “ಪ್ರೋ ಇಂಕಬೆನ್ಸಿ’ ವಾತಾವರಣವಿದೆ. ಜತೆಗೆ ಪ್ರಧಾನಿ ಮೋದಿ ಅಲೆಯೂ ಇದೆ. ಇನ್ನೊಂದೆಡೆ ರಾಜ್ಯ ಮೈತ್ರಿ ಸರ್ಕಾರದ ಆಡಳಿತ ವೈಫ‌ಲ್ಯ, ಪರಸ್ಪರ ಕಚ್ಚಾಟದಿಂದ ಜನ ಬೇಸತ್ತಿದ್ದಾರೆ. ಇದರ ಲಾಭ ಬಿಜೆಪಿಗೆ ಸಿಗಲಿದೆ.

* ರಾಜ್ಯದ ಚುನಾವಣಾ ಸಿದ್ಧತೆ ತೃಪ್ತಿಕರವಾಗಿದೆಯೇ?
ರಾಜ್ಯದಲ್ಲಿ ಬಿಜೆಪಿಗೆ ಸಂಘಟನಾತ್ಮಕ ಬಲವಿದೆ. ಚುನಾವಣೆ ಘೋಷಣೆಗೂ ಮುನ್ನ ಸಂಘಟನೆ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆದವು. ಪೇಜ್‌ ಪ್ರಮುಖ್‌ರಿಂದ ಹಿಡಿದು ಲೋಕಸಭಾ ಹಂತದವರೆಗೆ ಕಾರ್ಯಕರ್ತರ ಚಟುವಟಿಕೆ ಸಕ್ರಿಯವಾಗಿದೆ. ಬಿಜೆಪಿ ಸಂಸದರಿಲ್ಲದ ಕಡೆಯೂ ಮೂರು ತಿಂಗಳ ಹಿಂದೆಯೇ ಸಂಘಟನೆಗೆ ಒತ್ತು ನೀಡಲಾಗಿತ್ತು. ಪ್ರಧಾನಿಯವರು ಹುಬ್ಬಳ್ಳಿ, ಕಲಬುರಗಿಯಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ನಡೆಸಿ ಉತ್ತೇಜಿಸಿದ್ದರು. ನಾನಾ ಹಂತದ ಸಂಘಟನೆ ಜತೆಗೆ ಚುನಾವಣಾ ನಿರ್ವಹಣಾ ಸಮಿತಿ, ಕಾಲ್‌ಸೆಂಟರ್‌ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.

* ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆಯೇ?
ರಾಜ್ಯದಲ್ಲಿ ಗುತ್ತಿಗೆದಾರರ ಮೇಲೆ ಐಟಿ ದಾಳಿಯಾದರೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಚಿವರು ಪ್ರತಿಭಟನೆ ನಡೆಸುತ್ತಾರೆಂದರೆ ಏನು ಹೇಳಬೇಕು. ಪ್ರಧಾನಿ ಮೋದಿಯವರು ಈ ಹಿಂದೆ ಎಲ್ಲ ಭ್ರಷ್ಟರನ್ನು ರಸ್ತೆಯಲ್ಲಿ ನಿಲ್ಲಿಸುವುದಾಗಿ ಹೇಳಿದ್ದರು. ಅದರಂತೆ ನಡೆಯುತ್ತಿದೆ.

Advertisement

* ರಾಜ್ಯದ ಎಲ್ಲ ಹಾಲಿ ಸಂಸದರಿಗೆ ಟಿಕೆಟ್‌ ಸಿಗಲು ಕಾರಣ ಅರ್ಹತೆಯೋ, ಮೋದಿ ಅಲೆಯೋ?
ಬಿಜೆಪಿಯ ಕೆಲ ಹಾಲಿ ಸಂಸದರಿಗೆ ಸಂಬಂಧಪಟ್ಟಂತೆ ಸಣ್ಣ ಪುಟ್ಟ ಸಮಸ್ಯೆಗಳಿದ್ದವು. ಕಾರ್ಯಕರ್ತರ ನಡುವೆಯೂ ಸಮಸ್ಯೆಯಿತ್ತು. ಚುನಾವಣೆಗೂ ಮೊದಲೇ ಚರ್ಚಿಸಿ ಸಮಸ್ಯೆಗಳನ್ನು ನಿವಾರಿಸಿ ಸಂಘಟಿಸಲಾಗಿದೆ. ಕಳೆದ ವಿಧಾನಸಭೆಯಲ್ಲಿ ನಡೆದ ಘಟನೆ ಮರುಕಳಿಸಬಾರದು. ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸುವಂತೆ ತಿಳಿಸಲಾಗಿದೆ. ಕೆಲ ಸಮಸ್ಯೆಗಳಿದ್ದರೂ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿವೆ. ಎಲ್ಲ ಸಂಸದರು ತಮ್ಮ ಸಾಧನೆ ಕೈಪಿಡಿ ಮುದ್ರಿಸಿ ಜನರಿಗೆ ಹಂಚಿದ್ದಾರೆ. ಅಭ್ಯರ್ಥಿಗಳ ಬಗ್ಗೆ ಕೆಲವೆಡೆ ಆಕ್ಷೇಪವಿರಬಹುದೇನೋ, ಮೋದಿ ಬಗ್ಗೆ ಅಪಸ್ವರವಿಲ್ಲ

* ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಇನ್ನೂ ದುರ್ಬಲ ಹೌದಾ?
ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಮಾತ್ರ ಬಿಜೆಪಿಗೆ ಶಕ್ತಿ ಇಲ್ಲ. ಉಳಿದಂತೆ ಹಾಸನದಲ್ಲಿ ಒಬ್ಬ ಶಾಸಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಶಾಸಕರಿದ್ದಾರೆ. ಉಳಿದೆಡೆಯೂ ಪಕ್ಷಕ್ಕೆ ಬಲವಿದೆ.

* ಬಿಜೆಪಿಯಲ್ಲಿ ಸರ್ವ ಸಮುದಾಯಗಳ ನಾಯಕರು ಪ್ರಭಾವಿಗಳಾಗಿಲ್ಲ ನಿಜವೇ?
ರಾಜ್ಯಾಧ್ಯಕ್ಷರಾದ ಬಿ.ಎಸ್‌. ಯುಡಿಯೂರಪ್ಪ ನಮ್ಮ ನಾಯಕರು. ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಡಿ.ವಿ.ಸದಾನಂದಗೌಡ, ನಾನು ಸೇರಿದಂತೆ ಎಲ್ಲ ಸಮುದಾಯಗಳ ನಾಯಕರಿದ್ದು, ಸ್ಥಾನಮಾನವೂ ಸಿಗುತ್ತಿದೆ. ಎರಡನೇ ಹಂತದ ನಾಯಕರೂ ಹೆಚ್ಚಿದ್ದಾರೆ. ಬಿಜೆಪಿಯು “ಕೇಡರ್‌ ಬೇಸ್‌ ಮಾಸ್‌ ಆರ್ಗನೈಸೇಷನ್‌’ ಪಕ್ಷ.

* ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಿಲುವು?
ಉನ್ನತ ಸ್ಥಾನದಲ್ಲಿದ್ದವರು ಬಿಜೆಪಿ ಪಕ್ಷದ ಅಧ್ಯಕ್ಷರಾಗಿರಬಾರದು ಎಂಬ ಪರಂಪರೆ ಆರಂಭಿಸಿದ್ದು, ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರು. ಕ್ರಮೇಣ ಇತರೆ ಪಕ್ಷಗಳು ಅನುಕರಿಸಲಾರಂಭಿಸಿದವು. ವಂಶಾಡಳಿತ ತೊಡೆದು ಹಾಕಬೇಕೆಂಬ ಚಿಂತನೆಯೂ ಇದೆ. ಅದರಂತೆ ವಯೋಮಾನ ಕಾರಣಕ್ಕೆ ಅಡ್ವಾಣಿಯವರು ಸ್ಪರ್ಧಿಸದಿರುವಾಗ ಅವರ ಪುತ್ರಿಗೆ ಅವಕಾಶ ನೀಡಬೇಕೆಂಬ ಮಾತುಕತೆ ಕೇಂದ್ರ ಚುನಾವಣಾ ಸಮಿತಿಯಲ್ಲಿ ನಡೆಯಿತು. ಆ ಪರಂಪರೆ ಬೇಡ ಎಂದು ಅಡ್ವಾಣಿಯವರೇ ಹೇಳಿದ್ದಾರೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ಪ್ರಯತ್ನ ಶುರುವಾಗಿದೆ. ಇದನ್ನು ಕೆಲ ಪಕ್ಷಗಳು ಅನುಸರಿಸಿದರೆ ಕೆಲ ಪಕ್ಷಗಳು ಉಳಿಯವು.

* ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿಯಲ್ಲೂ ಹೈಕಮಾಂಡ್‌ ಸಂಸ್ಕೃತಿ ಶುರುವಾಗಿದೆಯೇ?
ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಇದೆ. ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ ಕುಮಾರ್‌ ಹೆಸರು ಶಿಫಾರಸ್ಸಾಗಿತ್ತು. ಸಮಿತಿಯ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿದ್ದೇವೆ. ಹಾಗೆಂದು ಇದು ಹೈಕಮಾಂಡ್‌ ಸಂಸ್ಕೃತಿಯಲ್ಲ. ವೈಜ್ಞಾನಿಕ ವಿಧಾನ ಅನುಸರಣೆ ಅಷ್ಟೆ. ವರಿಷ್ಠರು ಖಾಸಗಿ ಏಜೆನ್ಸಿಗಳ ಮೂಲಕ ಮಾಹಿತಿ ಪಡೆದಿರುತ್ತಾರೆ.

* ತೆಲಂಗಾಣ ಸ್ಥಿತಿ ಹೇಗಿದೆ?
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ನಾವು ಸೋತಿದ್ದು, ಶಾಸಕರ ಸಂಖ್ಯೆ ಐದರಿಂದ ಒಂದಕ್ಕೆ ಇಳಿದಿದೆ. ಲೋಕಸಭೆ ಚುನಾವಣೆಗೆ ಮೋದಿ ಪರ ಅಲೆ ಇದೆ. ಎಲ್ಲ 17 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಿದ್ದು, 10 ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನೀಡಲಿದ್ದೇವೆ. ಮುಂದೆ ಟಿಆರ್‌ಎಸ್‌ಗೆ ಬಿಜೆಪಿ ಪರ್ಯಾಯ ಪಕ್ಷವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.

* ಚುನಾವಣೆ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುವುದೆ?
ಖಂಡಿತ ಪರಿಣಾಮ ಬೀರಲಿದೆ. ಚುನಾವಣೆಗೂ ಮುನ್ನವೇ ಆಡಳಿತ ಪಕ್ಷಗಳ ಹಲವರು ಬಿಜೆಪಿಯನ್ನು ಸಂಪರ್ಕಿಸಿದರೂ ಕೇಂದ್ರ ನಾಯಕರು ಒಪ್ಪಿಗೆ ನೀಡಲಿಲ್ಲ. ಫ‌ಲಿತಾಂಶದ ನಂತರ ಅವರ ನಿಲುವು ಏನು ಎಂಬುದನ್ನು ನೋಡಬೇಕಿದೆ. ಕಿತ್ತಾಟದ ಆಡಳಿತಕ್ಕಿಂತ ಸ್ಥಿರ ಆಡಳಿತವನ್ನು ಶಾಸಕರು ಬಯಸುತ್ತಿದ್ದಾರೆ.

* ರಾಷ್ಟ್ರೀಯ ಪಕ್ಷವಾಗಿ ಮಂಡ್ಯದಲ್ಲಿ ಅಭ್ಯರ್ಥಿ ಕಣಕ್ಕಿಳಿಸದೆ ಸುಮಲತಾ ಅವರನ್ನು ಬೆಂಬಲಿಸಿದ ಉದ್ದೇಶವೇನು?
ಸುಮಲತಾ ಸಾರ್ವಜನಿಕವಾಗಿ ಬೆಂಬಲ ಕೋರಿದ್ದರು. ಹಿರಿಯ ಕಲಾವಿದರ ಮನೆತನಕ್ಕೆ ಗೌರವ ನೀಡಲು ಪಕ್ಷ ಬೆಂಬಲಿಸಿದೆ. ಕಾಂಗ್ರೆಸ್‌, ಜೆಡಿಎಸ್‌ಗೆ ಅಂಬರೀಶ್‌ ಅವರ ಕೊಡುಗೆ ಇತ್ತು. ಆದರೆ ನಮ್ಮ ಪಕ್ಷಕ್ಕೆ ಏನೂ ಇರಲಿಲ್ಲ. ಅಂಬರೀಶ್‌ ನಿಧನದಿಂದ ಅಪೂರ್ಣಗೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಲು ಸ್ಪರ್ಧಿಸಿರುವುದಾಗಿ ಸುಮಲತಾ ಅವರು ಹೇಳಿದ್ದರಿಂದ ಬೆಂಬಲಿಸಲಾಗಿದೆ. ಮೈತ್ರಿ ಅಭ್ಯರ್ಥಿ ಕಣಕ್ಕಿಯದಿದ್ದರೆ ಸುಮಲತಾ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಅಂಬರೀಶ್‌ ಮಂಡ್ಯದ ಜನರ ಮನಸ್ಸಿನಲ್ಲಿದ್ದಾರೆ. ಆದರೆ ಕಾಂಗ್ರೆಸ್‌, ಜೆಡಿಎಸ್‌ ಜನರ ಮನಸ್ಸಿನ ಭಾವನೆಗೆ ವಿರುದ್ಧವಾಗಿ ನಡೆದುಕೊಂಡಿವೆ. ಮಂಡ್ಯ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ 2.50 ಲಕ್ಷ ಮತ ಪಡೆದಿದ್ದರು. ಶಕ್ತಿ ಇಲ್ಲ ಎಂಬ ಕಾರಣಕ್ಕೆ ಬೆಂಬಲ ನೀಡಿದ್ದಲ್ಲ.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next