ಮಣಿಪಾಲ: ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳ ಬೆಳೆಸಬೇಕು ಜೊತೆಗೆ ಧೈರ್ಯ, ಸ್ಥೈರ್ಯವನ್ನು ತುಂಬುವ ಮೂಲಕ ಭವ್ಯ ಭಾರತವನ್ನು ಕಟ್ಟುವಲ್ಲಿ ಮಹತ್ವ ಪಾತ್ರ ವಹಿಸುವ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಲು ಶಿಕ್ಷಕರು ಮತ್ತು ಪೋಷಕರು ಹೆಚ್ಚು ಶ್ರಮವಹಿಸಬೇಕಾಗಿದೆ ಎಂದು ಸರ್ವಕ್ಷೇಮ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿವೇಕ್ ಉಡುಪ ಹೇಳಿದರು.
ಅವರು ಉದಯವಾಣಿಯು ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿಗುರು ಚಿತ್ರ-2022ರ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಬಹುಮಾನ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳಲ್ಲಿ ನಾವು ಸಾಮಾಜಿಕ, ಆಧ್ಯಾತ್ಮಿಕ, ಸಾಮರಸ್ಯದ ಕುರಿತು ಅರಿವು ಮೂಡಿಸಬೇಕಾಗಿದೆ. ಇಂದು ಶಿಕ್ಷಕರು, ಪೋಷಕರು ಸೇರಿದಂತೆ ಬಹುತೇಕ ಜನ ಒತ್ತಡದ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಶಿಕ್ಷಕರಾಗಲಿ, ಪೋಷಕರಾಗಲಿ ಬುದ್ದಿಮಾತು ಹೇಳುವ, ಶಿಕ್ಷೆ ಕೊಡುವ ಪರಿಸ್ಥಿತಿಯಲ್ಲೂ ಇಲ್ಲ. ಈ ನಿಟ್ಟಿನಲ್ಲಿ ನಾವು ಮಕ್ಕಳಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಹೊರತೆಗೆಯಲು ಉದಯವಾಣಿಯಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು. ಮಕ್ಕಳಿಗೆ ಮಾರ್ಗದರ್ಶನ ನೀಡಲು ಶಿಕ್ಷಕರು ಮತ್ತು ಪೋಷಕರಲ್ಲಿ ತಾಳ್ಮೆಯು ಅಗತ್ಯಗತ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಪ್ರಥಮ ಬಹುಮಾನ ವಿಜೇತ ಪುಟಾಣಿ ರಾಹಿತ್ಯ ಬಿ ಶೆಟ್ಟಿ ಕಾವೂರು, ದ್ವಿತೀಯ ಬಹುಮಾನ ವಿಜೇತ ಶಿವಾನ್ಯ ಪುಪ್ಪರಾಜ್ ಬಂಟ್ವಾಳ, ತೃತೀಯ ಬಹುಮಾನ ಸರಸ್ವತಿ ಅಮಿತ್ ಆಚಾರ್ಯ, ಕಂಕನಾಡಿ, ಗಣೇಶ್ ಎನ್.ಶೆಟ್ಟಿ, ಚಾಂತಾರು-ಬ್ರಹ್ಮಾವರ, ಪ್ರಣತಿ ಪೈ ಮುದ್ರಾಡಿ, ಕೆ.ಭೂಮಿ ಶೆವುಡ ಕಾರ್ಕಳ, ಅವ್ಯಾನ್ ಜೀವನ್ ಶೆಟ್ಟಿ ಚಿತ್ಪಾಡಿ ಹಾಗೂ ಧ್ರಯವಿ ಜೈನ್ ಮರೋಡಿ, ಬೆಳ್ತಂಗಡಿ ಇವರಿಗೆ ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಟಿ.ಸತೀಶ್.ಯು.ಪೈ ಅವರು ನಗದು ಮತ್ತು ಫಲಕದೊಂದಿಗೆ ಬಹುಮಾನ ವಿತರಿಸಿ, ಶುಭ ಹಾರೈಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ಸಂಪಾದಕ ಅರವಿಂದ ನಾವಡ ಮಾತನಾಡಿ, ಉದಯವಾಣಿ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಸುತ್ತಾ ಬಂದಿದೆ. ಆದರೆ ನಾವು ಇದನ್ನು ಸ್ಪರ್ಧೆ ಎಂದು ಹೇಳಲ್ಲ. ಇದೊಂದು ಇಡೀ ಕುಟುಂಬ ಭಾಗವಹಿಸುವ ಚಟುವಟಿಕೆಯಾಗಿದೆ. ಉದಯವಾಣಿಯ ಮತ್ತು ಕುಟುಂಬದ ಪರಂಪರೆಯ ಕೊಂಡಿಯನ್ನು ಬೆಸೆಯುವ ನಿಟ್ಟಿನಲ್ಲಿ ನಮ್ಮ ಹೊಸ ಆಲೋಚನೆ, ವೈವಿಧ್ಯಮಯ ಚಟುವಟಿಕೆಗಳಿಗೆ ನಿಮ್ಮ ಬೆಂಬಲ ಸದಾ ಹೀಗೆಯೆ ಮುಂದುವರಿಯಲಿ ಎಂದು ಹೇಳಿದರು.
ಉದಯವಾಣಿ ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಅವರು ವಂದಿಸಿದರು. ಪ್ರಸರಣ ವಿಭಾಗದ ಉಪಾಧ್ಯಕ್ಷ ಸತೀಶ್ ಶೆಣೈ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಮಚಂದದರ ಮಿಜಾರ್ ಕಾರ್ಯಕ್ರಮ ನಿರೂಪಿಸಿದರು.