Advertisement

ಕಾಂಗ್ರೆಸ್‌ಗೆ ನಿರೀಕ್ಷೆ  ಹುಟ್ಟಿಸಿದ ಪ್ರಿಯಾಂಕಾ ರೋಡ್‌ ಶೋ

12:30 AM Feb 12, 2019 | Team Udayavani |

ಲಕ್ನೋ: ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕ ದಲ್ಲಿ ಸೋಮವಾರ ಮಿಂಚಿನ ಸಂಚಾರವಿತ್ತು. ಅದಕ್ಕೆ ಕಾರಣ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ವಾದ್ರಾ ನಡೆಸಿದ ಅದ್ದೂರಿ ರೋಡ್‌ ಶೋ. 2014ರ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ಗೆ ಪ್ರಿಯಾಂಕಾ ಆಗಮನ ಹೊಸ ಭರವಸೆಯನ್ನು  ತುಂಬಿದಂತಿದೆ. 

Advertisement

ದಿಲ್ಲಿಯಿಂದ ಅಪರಾಹ್ನ 12.50ಕ್ಕೆ ಲಕ್ನೋಗೆ ಆಗಮಿಸಿದ ಪ್ರಿಯಾಂಕಾ ಮತ್ತು ರಾಹುಲ್‌ 1.15ಕ್ಕೆ ರೋಡ್‌ ಶೋ ಆರಂಭಿಸಿದರು. ಅವರಿಬ್ಬರಿಗೆ ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಸಾಥ್‌ ನೀಡಿದ್ದಾರೆ. ಮೊದಲಿಗೆ “ಮಿಷನ್‌ ಉತ್ತರ ಪ್ರದೇಶ’ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಚಾಲನೆ ನೀಡಿದರು. ಅನಂತರ ತೆರೆದ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ಆರಂಭಿಸಿದರು. ಇಬ್ಬರು ಪ್ರಭಾವಿ ನಾಯಕರತ್ತ ಅಭಿಮಾನಿಗಳು, ಕಾರ್ಯಕರ್ತರು ಪುಷ್ಪಗುತ್ಛ, ಹೂಮಾಲೆಗಳನ್ನು ಎಸೆದರು. ಲಕ್ನೋದ ಟ್ರಾನ್ಸ್‌ಪೊàರ್ಟ್‌ ನಗರ ಸ್ಟೇಷನ್‌ ಬಳಿಗೆ ನಾಯಕರಿದ್ದ ಬಸ್‌ ಬಂದಾಗ ಅಮೇಠಿಯಿಂದ ಆಗಮಿಸಿದ್ದ ಕಾಂಗ್ರೆಸ್‌ ನಾಯಕರು ಫ‌ಲಕಗಳನ್ನು ಹಿಡಿದು ರಾಹುಲ್‌, ಪ್ರಿಯಾಂಕಾ, ಸಿಂಧಿಯಾರನ್ನು ಸ್ವಾಗತಿಸಿದರು. ಸಂಜೆ 5.45ಕ್ಕೆ 25 ಕಿ.ಮೀ. ದೂರದ ರೋಡ್‌ ಶೋ ಕಾಂಗ್ರೆಸ್‌ ಕಚೇರಿ ಬಳಿ ಮುಕ್ತಾಯವಾಯಿತು. ಬಸ್‌ ನಿಂದ ಇಳಿದ ರಾಹುಲ್‌, ಪ್ರಿಯಾಂಕಾ ಕಾಂಗ್ರೆಸ್‌ ಕಚೇರಿ ಆವರಣ ದಲ್ಲಿರುವ ರಾಜೀವ್‌ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. 

ಅತ್ಯುತ್ಸಾಹ
ರಸ್ತೆಯ ಎರಡೂ ಬದಿ ಅಲ್ಲಲ್ಲಿ ಕಾರ್ಯಕರ್ತರು, ಬೆಂಬ ಲಿಗರು ಅತ್ಯುತ್ಸಾಹದಿಂದ ಪ್ರಿಯಾಂಕಾ, ರಾಹುಲ್‌ ಮೇಲೆ ಗುಲಾಬಿ ಎಸಳುಗಳನ್ನು ಚೆಲ್ಲುತ್ತಿದ್ದರು. “ಪ್ರಿಯಾಂಕಾ ದುರ್ಗಾ ಮಾತೆಯ ಅವತಾರ’ ಎಂಬ ಶಿರೋನಾಮೆಯುಳ್ಳ ಬ್ಯಾನರ್‌ಗಳೂ ನಗರದಲ್ಲಿ ಕಂಡು ಬಂತು.

ಪ್ರಿಯಾಂಕಾ ಸೇನೆ
ಪ್ರಿಯಾಂಕಾ ಅವರ ರ್ಯಾಲಿಯ ಸಂದರ್ಭ “ಪ್ರಿಯಾಂಕಾ ಸೇನೆ’ ಎಂಬ ಹೆಸರಿನ ಕಾಂಗ್ರೆಸ್‌ ಕಾರ್ಯಕರ್ತರ ತಂಡವೊಂದು ಗಮನ ಸೆಳೆಯಿತು. ಪ್ರಿಯಾಂಕಾ ಅವರ ಚಿತ್ರವನ್ನು ಹೊಂದಿದ್ದ ಪಿಂಕ್‌ ಕಲರ್‌ ಟೀ ಶರ್ಟ್‌ ಧರಿಸಿದ್ದ ಈ ತಂಡದ ಕಾರ್ಯಕರ್ತರು ರ್ಯಾಲಿಯ ಉದ್ದಕ್ಕೂ ಪಕ್ಷ ಮತ್ತು ನಾಯಕಿಗೆ ಜೈಕಾರ ಹಾಕಿ ಗಮನ ಸೆಳೆದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ತಿವಾರಿ ಅವರು ತನ್ನ ಕಾರನ್ನು ವಿಶೇಷವಾಗಿ ಶೃಂಗರಿಸಿ ಪ್ರಿಯಾಂಕಾ ಅವರಿಗೆ ಸ್ವಾಗತ ಕೋರಿದರು.

ಇಂದಿರಾ ಬಂದಂತೆ
“ಇಂದಿರಾ ಗಾಂಧಿ ವಾಪಸ್‌ ಬಂದಂತಾಯಿತು. ಉತ್ತರ ಪ್ರದೇಶದ ಜನರು ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು ಮತ್ತು ಪ್ರಿಯಾಂಕಾ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ’ ಎಂದು ಕಾರ್ಯಕರ್ತರು ರ್ಯಾಲಿಯ ಸಂದರ್ಭ ಮಾಧ್ಯಮಗಳಿಗೆ ತಿಳಿಸಿದರು.

Advertisement

ಧ್ವನಿ ಸಂದೇಶ ನೀಡಿದ ಪ್ರಿಯಾಂಕಾ
ಪ್ರಿಯಾಂಕಾ ವಾದ್ರಾ ಅವರು, “ಬನ್ನಿ, ಹೊಸ ಭವಿಷ್ಯ ನಿರ್ಮಿಸೋಣ. ಹೊಸ ರಾಜಕೀಯ ಮಾಡೋಣ. ಧನ್ಯವಾದಗಳು’ ಎಂಬ ಧ್ವನಿ ಸಂದೇಶವನ್ನು ಸೋಮವಾರ ಬೆಳಗ್ಗೆ ನೀಡಿ, ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಆಹ್ವಾನಿಸಿದ್ದರು.

25 ಕಿಮೀ ರೋಡ್‌ ಶೋ ನಡೆದದ್ದು
ಅಪರಾಹ್ನ 1.15 ಆರಂಭ 
ಸಂಜೆ 5.45 ಮುಕ್ತಾಯ

Advertisement

Udayavani is now on Telegram. Click here to join our channel and stay updated with the latest news.

Next