ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯುತ್ತಾರೆ ಎಂಬ ವದಂತಿಗೆ ಕೊನೆಗೂ ಕಾಂಗ್ರೆಸ್ ತೆರೆ ಎಳೆದಿದೆ. 2014ರಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಪಕ್ಷದ ನಾಯಕ ಅಜಯ್ ರೈ ಅವರಿಗೇ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಈ ಮೂಲಕ ವಾರಾಣಸಿಯಲ್ಲಿ ನಡೆಯಲಾಗುತ್ತದೆ ಎಂದು ಭಾವಿ ಸಲಾಗಿದ್ದ ರಾಜಕೀಯ ಬ್ಲಾಕ್‌ಬಸ್ಟರ್ ಕನಸು ನುಚ್ಚುನೂರಾಗಿದೆ. ಉತ್ತರ ಪ್ರದೇಶದ ಚುನಾವಣ ಪ್ರಚಾರ, ಕಾರ್ಯತಂತ್ರದಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ ಅವರೇ ವಾರಾಣಸಿಯಲ್ಲಿ ಸ್ಪರ್ಧಿಸುವ ಬಗ್ಗೆ ಹಲವು ಬಾರಿ ಸುಳಿವು ನೀಡಿದ್ದರು. ‘ನಾನು ವಾರಾಣಸಿಯಲ್ಲೇಕೆ ಸ್ಪರ್ಧಿಸಬಾರದು’ ಎಂದು ಕೇಳಿದ್ದಲ್ಲದೆ, ‘ಪಕ್ಷದ ಅಧ್ಯಕ್ಷರು ಸೂಚಿಸಿದರೆ ಖಂಡಿತಾ ಸ್ಪರ್ಧಿಸುತ್ತೇನೆ’ ಎಂಬ ಹೇಳಿಕೆಯನ್ನೂ ನೀಡುವ ಮೂಲಕ ಗಾಳಿಸುದ್ದಿಗೆ ಪ್ರಿಯಾಂಕಾ ಪುಷ್ಟಿ ನೀಡುತ್ತಾ ಬಂದಿದ್ದರು. ಆದರೆ, ಈಗ ಕಾಂಗ್ರೆಸ್ ಅಜಯ್ ರೈಗೆ ಟಿಕೆಟ್ ನೀಡುವ ಮೂಲಕ ಉ.ಪ್ರ. ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರೆರಚಿದೆ. ಇನ್ನೊಂದೆಡೆ, ಗೋರಖ್‌ಪುರದಲ್ಲಿ ಬಿಜೆಪಿಯ ರವಿ ಕಿಶನ್ ವಿರುದ್ಧ ಸ್ಪರ್ಧಿಸಲು ಮಧುಸೂದನ್ ತಿವಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.