ಲಕ್ನೋ: ಉತ್ತರಪ್ರದೇಶ ಅಭಿವೃದ್ಧಿಗೆ ಹೊರಗಿನವರಾಗಲಿ ಅಥವಾ ದತ್ತು ಪುತ್ರನ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
ಉತ್ತರಪ್ರದೇಶ ನನ್ನ ದತ್ತು ಪುತ್ರನನ್ನಾಗಿ ಸ್ವೀಕರಿಸಬೇಕು ಎಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರ ರಾಲಿಯಲ್ಲಿ ಹೇಳಿದ್ದರು. ಶುಕ್ರವಾರ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ರಾಹುಲ್ ಗಾಂಧಿ ಜತೆಗೂಡಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೊದಲಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಬಳಿಕ ಪ್ರಿಯಾಂಕಾ ಗಾಂಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರಪ್ರದೇಶದ ಅಭಿವೃದ್ಧಿಗೆ ಯಾವುದೇ ಹೊರಗಿನವರನ್ನು ದತ್ತು ತೆಗೆದುಕೊಳ್ಳುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಆದರೆ ಉತ್ತರಪ್ರದೇಶದ ಅಭಿವೃದ್ಧಿಗಾಗಿ ದತ್ತುಪುತ್ರನ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯದ ಪ್ರತಿಯೊಬ್ಬ ಯುವಕನೂ ನಾಯಕನಾಗಿ ಬೆಳೆಯಬಲ್ಲ. ಅವರೇ ರಾಜ್ಯದ ಅಭಿವೃದ್ಧಿಗೆ ದುಡಿಯುತ್ತಾರೆ. ಯಾರು ನಿಮಗಾಗಿ ಕೆಲಸ ಮಾಡುತ್ತಾರೋ ಅವರಿಗೆ ನಿಮ್ಮ ಮತ ಹಾಕಿ ಗೆಲ್ಲಿಸಿ ಎಂದರು.